ನಾಡಿನ ಸಂಪತ್ತು ರಕ್ಷಿಸೋಣ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 1
ಕನ್ನಡ ರಾಜ್ಯೋತ್ಸವ ಕೇವಲ ಭಾಷಣ ಮತ್ತು ಘೋಷಣೆಗಳಿಗೆ ಸೀಮಿತವಾಗದೆ ಕನ್ನಡ ಭಾಷೆ, ನೆಲ, ಜಲ, ಹಾಗೂ ಸಂಸ್ಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಸಹಾಯಕ ಆಯುಕ್ತ ಪಿ. ಸುನೀಲ್ಕುಮಾರ್ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ರಾಜ್ಯದ 30 ಜಿಲ್ಲೆಗಳಿಗೂ ರೋಚಕವಾದ ಇತಿಹಾಸವಿದೆ. ಕನ್ನಡ ಭಾಷೆಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಆದರೆ ಪರಭಾಷಿಕರ ಹಾವಳಿಯಿಂದಾಗಿ ಕನ್ನಡ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎಂದರು.
ತಹಸೀಲ್ದಾರ್ ರಮೇಶ್ ಕೋನರಡ್ಡಿ, ಡಿವೈಎಸ್ಪಿ ಡಿ.ಡಿ. ಮಾಳಗಿ, ತಾಪಂ ಇಒ ರಮೇಶ್ ತಳವಾರ್, ನಗರಸಭೆ ಪೌರಾಯುಕ್ತ ಮಹಮ್ಮದ್ ಮುನೀರ್, ಬಿಇಒ ಪಿ. ಸುನಂದಾ, ಜಿಪಂ ಇಇ ಮುತ್ತಯ್ಯ, ಟಿ.ಬಿ. ಡ್ಯಾಂ ಸಿಪಿಐ ಎಸ್.ಕೆ. ಪ್ರಹ್ಲಾದ್, ಶಿರಸ್ತೇದಾರ್ ರಾಘವೇಂದ್ರರಾವ್, ಶಿವರುದ್ರಪ್ಪ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಅಶ್ವನಿ ಶಾಲೆ, ವಿನೋಭಾಬಾವೆ ಶಾಲೆ, ನೇತಾಜಿ ಶಾಲೆ, ನೆಹರು ಶಾಲೆ, ಕೃಷಿ ಇಲಾಖೆ, ಕೆಎಸ್ಆರ್ಟಿಸಿ ಸಂಸ್ಥೆ ಸೇರಿದಂತೆ ಇತರೆ ಸಂಘ, ಸಂಸ್ಥೆಗಳ ಸ್ತಬ್ಧ ಚಿತ್ರಗಳು ಹಾಗೂ ಡೊಳ್ಳು ಕುಣಿತ, ನಂದಿಕೋಲು ಸೇರಿದಂತೆ ಇತರೆ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೆರವಣಿಗೆಯು ತಾಲೂಕು ಕ್ರೀಡಾಂಗಣದಿಂದ ಆರಂಭವಾಗಿ ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ನಂತರ ಎಂ.ಪಿ. ಪ್ರಕಾಶ್ ಕಲಾಮಂದಿರದಲ್ಲಿ ಮುಕ್ತಾಯಗೊಳಿಸಿತು.