ಆಂಧ್ರ- ಕರ್ನಾಟಕ ಗಡಿ ಸಮಸ್ಯೆ ಪರಿಹರಿಸಿ
ಬಳ್ಳಾರಿ: ಸುಪ್ರೀಂ ಕೋರ್ಟ್ ಆದೇಶದಂತೆ ಬಳ್ಳಾರಿ ಜಿಲ್ಲೆಯ ಗಣಿ ಪ್ರದೇಶದ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಕರ್ನಾಟಕ ಮತ್ತು ಆಂಧ್ರ ಸರ್ಕಾರಗಳು ಹಳೆಯ ರಾಕ್ ಪಾಯಿಂಟ್ಸ್ (ಕಲ್ಲು ಗುರುತುಗಳು) ಆಧಾರದ ಮೇಲೆ ಗಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ- ಆಂಧ್ರಪ್ರದೇಶಗಳ ಗಡಿ ಭಾಗದಲ್ಲಿನ ಗಣಿ ಮತ್ತು ಅರಣ್ಯ ಪ್ರದೇಶಗಳ ಗಡಿ ವಿವಾದವನ್ನು ಆರು ವಾರಗಳಲ್ಲಿ ಎರಡೂ ಸರ್ಕಾರಗಳು ಸರ್ವೇ ಆಫ್ ಇಂಡಿಯಾ ಇಲಾಖೆ ಸಹಯೋಗದೊಂದಿಗೆ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಗಡಿ ವಿವಾದ ಸಮಸ್ಯೆ ಬಗೆಹರಿಸಲು 1972ರಲ್ಲಿಯೇ ತಯಾರಿಸಲ್ಪಟ್ಟ ನಕ್ಷೆ ಹಾಗೂ ರಾಕ್ ಪಾಯಿಂಟ್ಸ್ ಆಧಾರದ ಮೇಲೆ ಸಮೀಕ್ಷೆ ನಡೆಸಿದಲ್ಲಿ ಗಡಿ ವಿವಾದವನ್ನು ಸುಲಭವಾಗಿ ಪರಿಹರಿಸಬಹುದು ಎಂದರು.
ಬಳ್ಳಾರಿ ತಾಲೂಕಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 70ರ ದಶಕದಲ್ಲಿಯೇ ಗುರುತಿಸಲ್ಪಟ್ಟ ಗುರುತುಗಳ ಆಧಾರದಲ್ಲಿ ಹಾಗೂ ಹಳೆಯ ಗ್ರಾಮ ನಕ್ಷೆಗಳ ಸಹಾಯದಿಂದ ಗಡಿ ಗುರುತು ನಿಗದಿಪಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗಡಿ ಗುರುತುಗಳನ್ನು ನಾಶಪಡಿಸಿದ್ದರೂ ಹಳೆಯ ದಾಖಲಾತಿ, ಗ್ರಾಮ ನಕ್ಷೆ, ರಾಕ್ ಪಾಯಿಂಟ್ಗಳ ಆಧಾರದಲ್ಲಿ ಪುನರ್ ಸ್ಥಾಪನೆ ಮಾಡಿ, ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಿಎಂ, ಸಚಿವರಿಗೆ ಮನವಿ: ಈ ಕುರಿತಂತೆ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಮತ್ತು ಕಾನೂನು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಹಳೆಯ ರಾಕ್ ಪಾಯಿಂಟ್ಗಳ ಆಧಾರದ ಮೇಲೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸುವುದಾಗಿ ತಿಳಿಸಿದರು.
ಪಟ್ಟಭದ್ರ ಹಿತಾಸಕ್ತಿಗಳಿಂದ ಧ್ವಂಸಗೊಂಡಿರುವ ಗಡಿ ಗುರುತುಗಳನ್ನು ಪತ್ತೆಹಚ್ಚಿ ಗಡಿ ಸಮಸ್ಯೆ ಇತ್ಯರ್ಥಪಡಿಸುವುದರಿಂದ ಗಡಿ ಭಾಗದಲ್ಲಿ ಪರವಾನಗಿ ಪಡೆದ ಗಣಿ ಕಂಪನಿಗಳ ಸಮಸ್ಯೆಯೂ ಇತ್ಯರ್ಥವಾಗಲಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆರು ವಾರಗಳ ಅವಧಿಯೊಳಗಾಗಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಅಂತಾರಾಜ್ಯಗಳ ಒಮ್ಮತದಿಂದ ಈ ಕಾರ್ಯ ನಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಏಕಾಂಬರಂ ಇದ್ದರು.