ಕಾರ್ಯಕ್ರಮದಿಂದ ಸಾಹಿತ್ಯಿಕ ಪ್ರಜ್ಞೆ
ಕುರುಗೋಡು: ಕನ್ನಡಪರ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಪ್ರಜ್ಞೆ ವೃದ್ಧಿಯಾಗಲು ಅನುಕೂಲವಾಗುತ್ತದೆ ಎಂದು ಬಿಇಒ ಅಶೋಕ್ ಸಿಂದಿಗಿ ಅಭಿಪ್ರಾಯಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಐತಿಹಾಸಿಕ ಪ್ರಸಿದ್ಧ ಅನೇಕ ಐತಿಹ್ಯಗಳ ಹಿನ್ನೆಲೆಯುಳ್ಳ ಕುರುಗೋಡು ಪಟ್ಟಣದಲ್ಲಿ ಇಂತಹ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಕಸಾಪಗೆ ನಮ್ಮ ಇಲಾಖೆಯ ಸಹಕಾರ ಸದಾ ಇರುತ್ತದೆ ಎಂದರು.
ದೀರ್ಘಕಾಲದ ಇತಿಹಾಸವಿದೆ: ನಂತರ ದತ್ತಿ ಉಪನ್ಯಾಸಕ ಮಂಜುನಾಥ್ ಮಾತನಾಡಿ, ಸಾಹಿತ್ಯಕ್ಕೆ ದೀರ್ಘಕಾಲದ ಇತಿಹಾಸವಿದೆ. ಸಮಾಜ ಬದಲಾದಂತೆ, ಬೆಳೆದಂತೆ ಸಾಹಿತ್ಯದ ಮೌಲ್ಯಗಳು ಬದಲಾಗಿವೆ. ಶರಣ ಸಾಹಿತ್ಯ ಜನರ ಸಾಹಿತ್ಯವಾಗಿ ರೂಪುಗೊಂಡಿದೆ. ಜನರ ಚಳವಳಿಯಿಂದ ಸಾಹಿತ್ಯದ ದಿಕ್ಕು ಬದಲಾಗುತ್ತಾ ಸಾಗಿದೆ. ವೈಜ್ಞಾನಿಕ ಅಧ್ಯಯನದಿಂದ ಇದು ಮೇಲೇರಬೇಕಿದೆ. ಇದಕ್ಕೆ ಹೊಸ ಚಿಂತನೆ ಅಗತ್ಯ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನದಲ್ಲಿ ಕುರುಗೋಡು ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಸಮಾವೇಶ ನಡೆಯಲಿದ್ದು. ಇಲ್ಲಿನ ಚಿಂತಕರ ಮತ್ತು ಬುದ್ಧಿಜೀವಿಗಳ ಸಹಕಾರ ಅಗತ್ಯವಿದೆ ಎಂದರು.
ಶಾಲೆಯ ಮುಖ್ಯಗುರು ಎಂ. ಗಂಗಾಧರ ನಾಯಕ್, ಶಿಕ್ಷಕ ಎರ್ರಿಸ್ವಾಮಿ, ಶ್ರೀಕಾಂತ್ ಮತ್ತಿತರರು ಇದ್ದರು. ನೀಲಾಂಬಿಕ, ನಂದಿನಿ ನಿರ್ವಹಿಸಿದರು.