ಬೆಳಕಿನ ಹಬ್ಬಕ್ಕೆ ಸಂಭ್ರಮದ ಖರೀದಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 3
ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ, ಪೂಜಾ ಕಾರ್ಯಕ್ರಮಕ್ಕಾಗಿ ವಿವಿಧ ವಸ್ತುಗಳ ಖರೀದಿ ಮತ್ತು ಪಟಾಕಿಗಳ ಖರೀದಿ ನಗರದಲ್ಲಿ ಭಾನುವಾರ ಜೋರಾಗಿ ನಡೆದಿತ್ತು.
ದೀಪಾವಳಿ ಹಬ್ಬಕ್ಕಾಗಿ ಬಾಳೆಕಂಬ, ಚೆಂಡುಹೂವಿನ ಗಿಡ, ಕಬ್ಬು ಸೇರಿದಂತೆ ವಿವಿಧ ತರದ ಹೂವು, ಹಣ್ಣುಗಳನ್ನು ಕೊಳ್ಳುವುದಕ್ಕಾಗಿ ಜನತೆ ಮಾರುಕಟೆಗೆ ಆಗಮಿಸಿ ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದು ಕಂಡುಬಂದಿತು. ಹಬ್ಬದಂದು ಪ್ರತಿಯೊಂದು ಅಂಗಡಿ ಸೇರಿದಂತೆ ವಿವಿಧ ವ್ಯಾಪಾರ ಮಾಡುವ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಸುಣ್ಣ-ಬಣ್ಣ ಹಚ್ಚಿ ದೀಪಾವಳಿಯಂದು ಲಕ್ಷ್ಮೀಯನ್ನು ಅದ್ಧೂರಿ ಮತ್ತು ಶ್ರದ್ಧಾ ಭಕ್ತಿಯಿಂದ ಪೂಜಿಸಲು ತಯಾರಿ ನಡೆಸಿದ್ದರು. ಅಂಗಡಿಗಳ ಮುಂದೆ ಕಟ್ಟಲು, ಶೃಂಗರಿಸಲು ಬಾಳೆಕಂಬ, ಚೆಂಡುಹೂವಿನ ಗಿಡ, ಮಾವಿನ ತೋರಣ, ವಿವಿಧ ತರದ ಹೂವುಗಳನ್ನು ಖರೀದಿಸಿ ಅಂಗಡಿಗಳನ್ನು ಅಲಂಕರಿಸುವಲ್ಲಿ ನಿರತರಾಗಿದ್ದರು.
ಮನೆಯಲ್ಲಿ ಹಾಗೂ ಅಂಗಡಿಗಳಲ್ಲಿ ಹಬ್ಬ ಆಚರಿಸುವ ಪ್ರತಿಯೊಬ್ಬರೂ ಹಬ್ಬಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಖರೀದಿಗಾಗಿ ಭಾನುವಾರ ನಗರದ ಮಾರುಕಟ್ಟೆ ಪ್ರದೇಶ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು. ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ಕೊಡುವಲ್ಲಿ ವ್ಯಾಪಾರಿಗಳು ಹೆಚ್ಚಿನ ಲಾಭ ನಿರೀಕ್ಷಿಸದೆ ಸಂತೋಷದಿಂದಲೇ ವ್ಯಾಪಾರದಲ್ಲಿ ತೊಡಗಿದ್ದರು. ಖರೀದಿಗೆ ಅಧಿಕ ಸಂಖ್ಯೆಯ ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಮಾರುಕಟ್ಟೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಬೆಲೆ ಹೆಚ್ಚಿದ್ದರೂ: ಹಲವು ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಜನತೆ ಖರೀದಿಯಲ್ಲಿ ತೊಡಗಿತ್ತು. ಹೂವು, ವಿವಿಧ ಹಣ್ಣುಗಳ ಬೆಲೆ ಸಹಜವಾಗಿ ಹೆಚ್ಚಿತ್ತು. ಜೋಡು ಬಾಳೆಕಂಬಕ್ಕೆ ರು. 20ರಿಂದ 100ರ ವರೆಗೆ ಇದ್ದರೆ, ರು. 20ಗೆ ಚೆಂಡುಹೂವಿನ ಗಿಡದ ಕಟ್ಟು ಇತ್ತು. ಮಲ್ಲಿಗೆ ಹೂವು, ಕನಕಾಂಬರಿ, ಸೇವಂತಿಗೆ ಸೇರಿದತಂತೆ ವಿವಿಧ ಹೂವುಗಳು ಹಾಗೂ ವಿವಿಧ ರೀತಿಯ ಹಣ್ಣುಗಳ ಖರೀದಿ ಜೋರಾಗಿಯೇ ಇತ್ತು. ಬೆಲೆ ಎಷ್ಟಾದರೇನು ಹಬ್ಬಕ್ಕೆ ವಸ್ತುಗಳು ಬೇಕೆ ಬೇಕು ಎಂಬ ನಿಲುವಿನಿಂದಾಗಿ ಜನತೆ ವ್ಯಾಪಾರಿಗಳೊಂದಿಗೆ ಚೌಕಾಸಿ ಮಾಡುತ್ತಲೇ ಖರೀದಿಯಲ್ಲಿ ನಿರತರಾಗಿದ್ದರು.
ಎರಡು ವರ್ಷಗಳಿಗೆ ಹೋಲಿಸಿದರೆ ಈಬಾರಿ ದೀಪಾವಳಿ ನಗರದಲ್ಲಿ ಜೋರಾಗಿ ನಡೆಯುತ್ತಿದೆ. ತಾಲೂಕಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಬೆಳೆ ಬಂದಿದ್ದರಿಂದ ಜನರ ಕೈಯಲ್ಲಿ ಸ್ವಲ್ಪ ಮಟ್ಟಿಗೆ ಹಣ ಹರಿದಾಡುತ್ತಿದೆ. ಹೀಗಾಗಿ ಹಬ್ಬವನ್ನು ಕೊಂಚ ಜೋರಾಗಿಯೇ ಮಾಡುತ್ತಿದ್ದು, ಖರೀದಿಯೂ ಚೆನ್ನಾಗಿ ಮಾಡುತ್ತಿದ್ದಾರೆ ಎಂಬುದು ವ್ಯಾಪಾರಿಗಳ ಮಾತು.