ಸಿಬಿಐಗೆ ಬೆದರಿ ಬೆಂಗಳೂರಲ್ಲಿ ಬಿಡಾರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 3
ಸಿಬಿಐ ನೋಟಿಸ್ ನೀಡಿದಾಗ ಬರಬೇಕು, ಇಲ್ಲದಿದ್ದರೆ ಬಂಧನ ಗ್ಯಾರಂಟಿ ಎಂದು ಭಯಭೀತರಾಗಿರುವ ಗಣಿ ಎಕ್ಸ್ಪೋರ್ಟರ್ಸ್, ಟ್ರೇಡರ್ಸ್ ಹಾಗೂ ಟ್ರಾನ್ಸ್ಪೋರ್ಟರ್ಗಳು, ಗಣಿ ವಲಯದ ವ್ಯಾಪಾರಿಗಳು ಇದೀಗ ಬೆಂಗಳೂರಿನಲ್ಲೇ ಬಿಡಾರ ಹೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಯಾವ ಸಂದರ್ಭದಲ್ಲಿ ಸಿಬಿಐ ಕರೆ ಬರುತ್ತದೋ ಎಂಬ ಭೀತಿಯಲ್ಲೇ ಒಂದು ವರ್ಷದಿಂದ ಜೀವನ ಸಾಗಿಸುತ್ತಿದ್ದಾರೆ ಗಣಿ ಉದ್ಯಮಿಗಳು. ಗಣಿಯಿಂದಾಗಿ ನೆಮ್ಮದಿ ಇಲ್ಲದ ಜೀವನ ನಡೆಸುವಂತಾಗಿ ಏಕಾದರೂ ಗಣಿ ವ್ಯವಹಾರ ಮಾಡಿದ್ದೇವೆಯೋ ಎಂದು ಪರಿತಪಿಸುವಂತಾಗಿದೆ. ಸಿಬಿಐ ತನಿಖೆ ಪ್ರತಿಯೊಬ್ಬ ಗಣಿ ಉದ್ಯಮಿಯನ್ನು ಕಾಡುತ್ತಿದೆ. ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡು ಯಾವುದೇ ಅಕ್ರಮ ಮಾಡದಿದ್ದರೂ, ಅಕ್ರಮ ಮಾಡಿದವರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದರೆ, ಅವರು ಪಡೆದ ಅದಿರು, ಯಾವ ರೀತಿಯ ವ್ಯವಹಾರ ಎಂಬ ಮಾಹಿತಿಯನ್ನು ಸಿಬಿಐ ಪಡೆಯಬೇಕಾಗಿದೆ. ಹೀಗಾಗಿ ಗಣಿ ತನಿಖೆ ಸದ್ಯ ಎಲ್ಲರನ್ನೂ ಬಾಧಿಸುತ್ತಿದೆ. ಇದರಿಂದಾಗಿ ಗಣಿ ಸಹವಾಸ ಸಾಕಪ್ಪ ಸಾಕು ಎನ್ನುವಂತಾಗಿದೆ.
ಗಣಿ ವಲಯಕ್ಕೇ ಭೀತಿ: ಅಕ್ರಮ ಮಾಡಿದವರ ಬಂಧನದ ಸಂದರ್ಭ ಇತರರಿಗೆ ನೋಟಿಸ್ ಅಥವಾ ವಿಚಾರಣೆಯ ಕರೆ ಬರುತ್ತದೆಯಂತೆ. ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸುವಾಗ ಅವರು ನೀಡುವ ಹೇಳಿಕೆ ಆಧರಿಸಿ ಅವರು ಅದಿರನ್ನು ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಪಡೆದು, ಅದಿರು ವ್ಯಾಪಾರಸ್ಥರಿಗೆ ಕರೆ ಮಾಡಿ ಮಾಹಿತಿ ಪಡೆದು, ವಿಚಾರಣೆ ಸಂದರ್ಭ ನೀಡಿರುವ ಹೇಳಿಕೆ ಸರಿಯೋ, ಅದು ಅಧಿಕೃತ ಅದಿರೋ, ಅಂತಹ ಅದಿರನ್ನು ಎಲ್ಲಿಗೆ ಸಾಗಿಸಿದ್ದಾರೆ ಎಂಬುದರ ಕುರಿತು ಅದಿರು ಸಾಗಾಣಿಕೆದಾರರಿಂದ ಮಾಹಿತಿ ಪಡೆಯುತ್ತಾರೆ. ಹೀಗಾಗಿ ಯಾವ ಸಂದರ್ಭದಲ್ಲಿ ಟ್ರಾನ್ಸ್ಪೋರ್ಟ್, ಎಕ್ಸ್ಪೋರ್ಟ್ರ್ಸ್ಗಳಿಗೆ ವಿಚಾರಣೆ ಕರೆ ಬರುತ್ತದೆ ಎಂಬ ಭೀತಿಯಲ್ಲಿ ದಿನ ದೂಡುತ್ತಿದ್ದಾರೆ.
ತನಿಖೆ ಆಧರಿಸಿ ವಿಚಾರಣೆಗೆ ಕರೆ: ಈಗಾಗಲೇ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತ ಶಾಸಕರಾದ ಟಿ.ಎಚ್. ಸುರೇಶ್ಬಾಬು, ಸತೀಶ್ ಸೈಲ್, ನಾಗೇಂದ್ರ, ಬಿ.ಎಸ್. ಆನಂದ್ಸಿಂಗ್ ಅವರು ತಮ್ಮ ಅದಿರು ಸಾಗಾಣಿಕೆ, ವ್ಯವಹಾರದ ಬಗ್ಗೆ ನೀಡಿದ ಮಾಹಿತಿಯಂತೆ ಸಂಬಂಧಿಸಿದ ಕಂಪನಿಗಳ ವ್ಯಕ್ತಿ, ಟ್ರೇಡರ್ಸ್ಗಳಿಂದ ಮಾಹಿತಿ ಪಡೆಯುವುದು ಅವಶ್ಯವಾಗಿದೆ. ಇದರಿಂದಾಗಿ ಗಣಿ ವಲಯದಲ್ಲಿ ಕೆಲಸ ಮಾಡುತ್ತಿರುವ, ಮಾಡಿರುವ ಬಹುತೇಕರು ಸಿಬಿಐಗೆ ಮಾಹಿತಿ ನೀಡಬೇಕಾಗಿದ್ದರಿಂದ ಸಿಬಿಐ ಅವರನ್ನು ವಿಚಾರಣೆಗೆ ಒಳಪಡಿಸಿ, ಅಗತ್ಯ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತಿದೆ.
ಬೆಂಗಳೂರಿನಲ್ಲಿ ಬಿಡಾರ: ಸಿಬಿಐ ಅಧಿಕಾರಿಗಳು ಯಾವ ಸಂದರ್ಭ ವಿಚಾರಣೆಗೆ ಕರೆಯುತ್ತಾರೆ ಎಂಬ ಭೀತಿ ಹಿನ್ನೆಲೆಯಲ್ಲಿ ಗಣಿ ಜಿಲ್ಲೆಗಳ ಕೆಲ ಟ್ರೇಡರ್ಸ್ ಮತ್ತು ಟ್ರಾನ್ಸ್ಪೋರ್ಟರ್ಸ್ಗಳು ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದಾರಂತೆ.
ಸಿಬಿಐ ಕೇಳುವ ಮಾಹಿತಿ ನೀಡಬೇಕು. ಹಾಗಾಗಿ ಒಂದು ವರ್ಷದಿಂದ ಬೇರೆ ಕೆಲಸವೇ ಇಲ್ಲದೆ ಸಿಬಿಐ ವಿಚಾರಣೆಗೆ ಸಹಕರಿಸುತ್ತ ಜೀವನ ಸಾಗಿಸುತ್ತಿದ್ದಾರೆ. ಬೇಲೆಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖರಾದವರನ್ನು ಬಂಧಿಸಿದ್ದು, ಬಂಧಿತರು ಯಾರ ಹೆಸರುಗಳನ್ನು ಹೇಳುತ್ತಾರೆ, ಸಿಬಿಐನಿಂದ ಕರೆ ಬರುತ್ತದೆಯೇ ಎಂಬುದನ್ನು ಕಾಯುತ್ತಾ ಕುಳಿತುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದುವೇಳೆ ಸಿಬಿಐ ಕರೆದಾಗ ಹೋಗದಿದ್ದರೆ ಎಲ್ಲಿ ತಮ್ಮನ್ನು ಬಂಧಿಸುತ್ತಾರೆಂಬ ಆತಂಕ ಇವರಲ್ಲಿದೆ.
ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡು ದುಡ್ಡುಗಳಿಸಿ ಐಷಾರಾಮಿ ಬದುಕು ನಡೆಸಿದ್ದ ಅವರಿಗೆ ಈಗ ಗಣಿ ಜೀವನ ಬೇಡವೆ ಬೇಡ ಎನ್ನುವ ಪರಿಸ್ಥಿತಿಯನ್ನು ಸಿಬಿಐ ತನಿಖೆ ತಂದೊಡ್ಡಿದೆ. ಎಲ್ಲೋ ಒಂದು ಕಡೆ ರೊಟ್ಟಿ ಚಟ್ನಿ ತಿಂದು ಬದುಕಿದ್ದೆವು, ಆದರೀಗ ಇದೆಲ್ಲ ಬೇಕಿತ್ತಾ ಎಂಬ ಭಾವ ಅವರಲ್ಲಿ ವ್ಯಕ್ತವಾಗುವಂತೆ ಮಾಡಿದೆ ಸಿಬಿಐ. ಇನ್ನು ಎಷ್ಟು ಜನರು ಸಿಬಿಐ ತನಿಖೆಯ ಬಲೆಗೆ ಬಲಿಯಾಗುತ್ತಾರೋ ಎಂಬ ಆತಂಕ ಎಷ್ಟು ದಿನ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
-ಶಶಿಧರ ಮೇಟಿ