ಆಯುರ್ವೇದದಿಂದ ಶಾಶ್ವತ ಪರಿಹಾರ
ಹೂವಿನಹಡಗಲಿ: ಆಯುರ್ವೇದ ವೈದ್ಯ ಪದ್ಧತಿ ನಿಧಾನವಾದರೂ ಶಾಶ್ವತ ಪರಿಹಾರ ನೀಡುತ್ತದೆ ಎಂದು ಮಹಾಗಣಪತಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಓದೋ ಗಂಗಪ್ಪ ಅಭಿಪ್ರಾಯಿಸಿದರು.
ಇಲ್ಲಿನ ಸಿಂಗಟಾಲೂರು ಏತನೀರಾವರಿ ಯೋಜನೆಯ ನೌಕರರ ಕಾಲೋನಿಯಲ್ಲಿನ ಮಹಾಗಣಪತಿ ದೇವಸ್ಥಾನದಲ್ಲಿ ನಾವಿಕ ಪ್ರತಿಷ್ಠಾನ ಮತ್ತು ಆಯುಷ್ ವೈದ್ಯಕೀಯ ಸಂಘ ಆಯೋಜಿಸಿದ್ದ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಎಂಎ ಅಧ್ಯಕ್ಷ ಡಾ.ಕೆ. ಮಲ್ಲಿಕಾರ್ಜುನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯವಸ್ಥಿತ ಆಹಾರ ಪದ್ಧತಿಯಲ್ಲಿಯೇ ಆಯುರ್ವೇದ ಅಡಗಿದೆ. ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಅತಿಯಾದ ಔಷಧಿ ಸೇವನೆಯಿಂದ ದೇಹದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಆಯುರ್ವೇದ ಪದ್ಧತಿಯಲ್ಲಿ ಎಲ್ಲ ರೋಗಗಳಿಗೂ ಪರಿಹಾರವಿದೆ ಎಂದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ಯೋಗಾನಂದ, ಆಯುರ್ವೇದ ಕುರಿತು ಉಪನ್ಯಾಸ ನೀಡಿದ ಡಾ. ಹರಿಣಿ ಶ್ರೀನಿವಾಸ್ ಮಾತನಾಡಿದರು. ಹಿರಿಯ ಆಯುರ್ವೇದ ವೈದ್ಯ ಡಾ.ಬಿ.ಟಿ. ಫಣಿರಾಜ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಉಮೇಶ್, ಡಾ.ಬಿ. ಶ್ರೀನಿವಾಸ್, ದೇವಸ್ಥಾನ ಅರ್ಚಕ ಶಶಿಕಾಂತ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.