ಪಾಶ್ಚಾತ್ಯ ಸಂಸ್ಕೃತಿಯಿಂದ ದೇಶಿ ಸಂಸ್ಕೃತಿ ಮರೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 4
ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿರುವ ಯುವ ಪೀಳಿಗೆ ಅತಂತ್ರ ಸ್ಥಿತಿಯಲ್ಲಿದ್ದು, ದೇಶಿ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಡಿವೈಎಸ್ಪಿ ಆರ್.ಎಸ್. ಪಾಟೀಲ್ ಆತಂಕ ವ್ಯಕ್ತಪಡಿಸಿದರು.
ಡಾ.ಎಚ್.ಎಲ್. ನಾಗೇಗೌಡ ಸ್ಮರಣಾರ್ಥ ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ಶಾಲಾ ಕಾಲೇಜಿಗೊಂದು ಜನಪದ ಬಂಡಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತಿ ಉಳಿಸಿ, ಬೆಳೆಸಿ: ಈ ನಾಡಿನ ಸಂಸ್ಕೃತಿಗೆ ತಾಯಿಬೇರು ಜನಪದ, ವ್ಯಕ್ತಿಯ ಬಾಲ್ಯದಿಂದ ಮುಪ್ಪಿನವರೆಗೂ ಜನಪದ ಸೊಗಡು ಹಾಸುಹೊಕ್ಕಾಗಿದೆ. ಜನಪದ ಸಾಹಿತ್ಯ, ಜನಪದ ಕಲೆ, ಜನಪದ ಗೀತೆಗಳು, ಜನಪದ ಕ್ರೀಡೆ ಹೀಗೆ ವಿಶಾಲ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತ ಜನಪದರು ಜನ ಜೀವನವನ್ನು ಶ್ರೀಮಂತಗೊಳಿಸಿ ಜೀವನಕ್ಕೆ ಸ್ಫೂರ್ತಿ ತುಂಬಿದ್ದಾರೆ. ಹೀಗಾಗಿ ಯುವಪೀಳಿಗೆ ಇದರತ್ತ ಗಮನ ಹರಿಸಿ, ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದರು.
ಉಪನ್ಯಾಸಕ ಬಸವರಾಜ ಹೆಬ್ಬಾಳ್ ಜನಪದ ಸಾಹಿತ್ಯ ಇಂದಿನ ಆಗು ಹೋಗುಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತ, ಭಾರತದಲ್ಲಿರುವಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಹೋದರತ್ವ ಸಂಬಂಧಗಳು ಇಲ್ಲ. ಇಲ್ಲಿನ ಸಂಸ್ಕೃತಿ, ಸಂಸ್ಕಾರ ಪರಂಪರೆಯನ್ನು ನೋಡಿ ವಿದೇಶಿಯರು ಕಲಿಯುತ್ತಿದ್ದಾರೆ. ಆದರೆ ನಮ್ಮ ಯುವಜನತೆ ಪಾಶ್ಚಾತ್ಯದತ್ತ ವಾಲುತ್ತಿರುವುದು ಖೇದಕರ ಎಂದರು.
ಜನರ ಜೀವನ: ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಮೇಟಿ ಕೊಟ್ರಪ್ಪ ಮಾತನಾಡಿ, ಜನಪದವೇ ಜನರ ಜೀವನ, ಶ್ರಮ ಸಂಸ್ಕೃತಿಯ ಬದುಕನ್ನು ಶ್ರೀಮಂತಗೊಳಿಸುವುದೇ ಜನಪದ ಸಂಸ್ಕೃತಿಯಾಗಿದೆ. ಮಾನವೀಯ ಮೌಲ್ಯಗಳನ್ನು ತಮ್ಮ ಭವಿಷ್ಯತ್ತಿನ ಬದುಕಿನಲ್ಲಿ ಅಳವಡಿಸಿಕೊಂಡು ಜಾನಪದ ಸಂಸ್ಕೃತಿಯನ್ನು ಪರಿಪಾಲಿಸಬೇಕೆಂದರು.
ಕಾಲೇಜು ಪ್ರಾಚಾರ್ಯ ಡಾ.ಎನ್. ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕ ಅಧ್ಯಕ್ಷ ಎಲ್. ಖಾದರ್ ಬಾಷಾ, ಲೇಖಕ ಶಾಂತಮೂರ್ತಿ ಕುಲಕರ್ಣಿ, ಎಚ್. ಶೇಷಗಿರಿರಾವ್, ಕರಿವೀರನಗೌಡ ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಜನಪದ ಪ್ರಕಾರಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಜನಪದ ಗೀತೆಯಲ್ಲಿ ಅಮೃತವರ್ಷಿಣಿ, ನಜ್ಮಾ, ಶಕುಂತಲಾ, ಪ್ರಕಾಶ್, ಛದ್ಮವೇಷ ಸ್ಪರ್ಧೆಯಲ್ಲಿ ಅಚ್ಚುತ್ ಡಿ. ಕುಲಕರ್ಣಿ, ನಿರಂಜನಸ್ವಾಮಿ, ಶಿಶುವಿನಹಳ್ಳಿ ಸುರೇಶ, ಪ್ರದೀಪ್, ನೃತ್ಯದಲ್ಲಿ ವಿಶ್ವನಾಥ ಪಟ್ಟಣ ಶೆಟ್ಟಿ ತಂಡದವರು ಪ್ರಥಮ, ಅನಿಲ್ಕುಮಾರ ದಳವಾಯಿ ತಂಡ ದ್ವಿತೀಯ, ಮಂಜುನಾಥ ತಂಡ ತೃತೀಯ ಬಹುಮಾನ ಪಡೆಯಿತು.
ಜಾನಪದ ಕಲಾವಿದ ಅತಿಥಿ ಕೆ.ಸಿ. ಪರಶುರಾಮ ಅಂಗೂರು ಅವರ ಲಾವಣಿ ಹಾಡುಗಳು ಮನಸೊರೆಗೊಂಡವು. ಪರಿಷತ್ನ ಕಾರ್ಯದರ್ಶಿ ಪ್ರಾಸ್ತಾವಿಕ ಮಾತನಾಡಿದರು. ಉಮಾಪತಿ, ಎಲ್. ಮಧುನಾಯ್ಕ, ಕೆ. ವೆಂಕಟೇಶ ಪರಿಚಯಿಸಿದರು. ಬಿ. ಬಲರಾಮ್ ಸ್ವಾಗತಿಸಿದರು. ಎಚ್.ಬಿ. ವಿನಯ್ ನಿರೂಪಿಸಿದರು. ಎನ್ನೆಸ್ಸೆಸ್ ಘಟಕಾಧಿಕಾರಿ ಕೆ. ಸುರೇಶ ವಂದಿಸಿದರು.