ವಿವಿಧ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿ ನ. 12ರಂದು ನಡೆಯಲಿರುವ 5 ಜಿಲ್ಲೆಗಳ ರೈತರ ಸಮಾವೇಶದ ಅಂಗವಾಗಿ ಭಾನುವಾರ ರೈತರ ಪೂರ್ವಭಾವಿ ಸಭೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆದ ಬತ್ತ, ಮೆಕ್ಕೆಜೋಳ, ಹತ್ತಿ ಇತರೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಮೂಲಕ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.
ರೈತರು ಪ್ರತಿ ಎಕರೆಯಲ್ಲಿ ಬೆಳೆದ ಬೆಳೆಗೆ ಕನಿಷ್ಠ ಅರ್ಧದಷ್ಟಾದರೂ ಲಾಭ ಬರುವಂತೆ ಬೆಲೆ ನಿಗದಿ ಮಾಡಲಿ ಎಂದು ತಿಳಿಸಿದರು.
12ರಂದು ಸಮಾವೇಶ: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನವೆಂಬರ್ 12ರಂದು ರೈತ ಸಮಾವೇಶದಲ್ಲಿ ಐದು ಜಿಲ್ಲೆಗಳಿಂದ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಅಂಗವಾಗಿ ದರೂರಿನಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು, ಇದರಲ್ಲಿ ನೂರಾರು ರೈತರು ಭಾಗವಹಿಸಿರುವುದು ಮತ್ತಷ್ಟು ಹುರುಪು ತಂದಿದೆ ಎಂದರು.
ಈ ಸಂದರ್ಭ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ದರೂರು ಪುರುಷೋತ್ತಮ ಗೌಡ, ದರೂರು ಶಾಂತನಗೌಡ, ಕುಂದಾಪುರ ನಾಗರಾಜ್ ಸಂಘದ ಪದಾಧಿಕಾರಿಗಳು, ಮುಖಂಡರು ಮತ್ತು ರೈತರು ಭಾಗವಹಿಸಿದ್ದರು.