ಹಗರಿಬೊಮ್ಮನಹಳ್ಳಿ: ರಕ್ತದಾನ ಶಿಬಿರ
ಹಗರಿಬೊಮ್ಮನಹಳ್ಳಿ: ಇಲ್ಲಿನ ಸ್ವಾಮಿ ವಿವೇಕಾನಂದ ಟ್ರಸ್ಟ್ನ ಕಾರ್ಯಕರ್ತರು ರಕ್ತದಾನ ಶಿಬಿರ ಆಯೋಜಿಸಿದ್ದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿದರು.
ರಕ್ತದಾನ ಶಿಬಿರದ ಚಾಲನೆ ನೀಡಿ, ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿದರು. ತಾಲೂಕಿನ ನಂದಿಪುರದ ಮಹೇಶ್ವರ ಸ್ವಾಮಿ, ಟ್ರಸ್ಟ್ನ ಮುಖಂಡರಾದ ಡಂಬ್ರಹಳ್ಳಿ ಶಿವಪ್ಪ, ಚಿತ್ರಗಾರ ರುದ್ರಪ್ಪ, ಮರಿ ರಾಮಪ್ಪ, ಎನ್. ಶ್ರೀನಿವಾಸ, ಮುಧೋಳ ಶಿವರುದ್ರಪ್ಪ, ಜಹಾಂಗೀರ್, ಕೆ. ಗೋವಿಂದಪ್ಪ, ಗಂಗಾಧರ, ವೈದ್ಯಾಧಿಕಾರಿ ಪ್ರಕಾಶ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಿ: ಶ್ರೀ
ಹೊಸಪೇಟೆ: ಪ್ರತಿಯೊಬ್ಬರೂ ಉತ್ತಮ ಜ್ಞಾನ ಬೆಳೆಸಿಕೊಂಡು ನಿತ್ಯ ಜೀವನದಲ್ಲಿ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿಸ್ವಾಮೀಜಿ ಹೇಳಿದರು. ಅವರು ಹಂಪಿಯ ಅನ್ನಪೂರ್ಣೇಶ್ವರಿ ಅನ್ನ ಛತ್ರದಲ್ಲಿ ಗಂಗಾವತಿಯ ಮಜ್ಜಿಗುದ್ಗುರು ಶಂಕರಾಚಾರ್ಯ ಸೇವಾ ಟ್ರಸ್ಟ್ನಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುದ್ವಾದಶಿ ಆಚರಣೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ಅನೇಕ ಒತ್ತಡಗಳ ನಡುವೆ ಜೀವನ ಸಾಗಿಸುತ್ತಿರುವುದರಿಂದ ನೆಮ್ಮದಿಯನ್ನು ಕಳೆದುಕೊಂಡು ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ. ಮನಸ್ಸಿಗೆ ಶಾಂತಿ ಮತ್ತು ಆರೋಗ್ಯ ಮುಖ್ಯವಾಗಿದೆ. ಶಾಂತಿ ಮತ್ತು ಆರೋಗ್ಯ ಬಿಟ್ಟು ಸಂಪಾದನೆ ಮಾಡಲು ಹೊರಟಿರುವುದು ಸರಿಯಲ್ಲ ಎಂದರು. ಇತ್ತೀಚಿನ ಯುವಕರು ಭಾರತೀಯ ಸಂಸ್ಕೃತಿಯನ್ನು ಅವಹೇಳನ ಮಾಡುವ ಮೂಲಕ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಇದು ಅಪಾಯಕಾರಿ ಸಂಗತಿಯಾಗಿದ್ದು, ದೇಶೀಯ ಸಂಸ್ಕೃತಿಯನ್ನು ಮಕ್ಕಳಿಗೆ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ನಮ್ಮ ದೇಶದ ಸಂಸ್ಕೃತಿ ಪಾಲಿಸಬೇಕು ಎಂದು ತಿಳಿಸಿದರು. ಮುಖಂಡ ನಾರಾಯಣರಾವ್, ಮಹೇಶ್ ಜೋಷಿ ಭಟ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಜೂಜಾಟ: 24 ಜನರ ಬಂಧನ
ಸಂಡೂರು: ದೋಣಿಮಲೈನ ಟೌನ್ಶಿಪ್ನಲ್ಲಿರುವ ರಿಕ್ರಿಯೇಶನ್ ಕ್ಲಬ್ನ ಮೇಲೆ ಪೊಲೀಸರು ದಾಳಿ ನಡೆಸಿ 24 ಜನರನ್ನು ಬಂಧಿಸಿದ್ದು, ಬಂಧಿತರಿಂದ ರು. 30,515ಗಳನ್ನು ವಶಪಡಿಸಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯ ದೋಣಿ ಮಲೈ ಟೌನ್ಶಿಪ್ನಲ್ಲಿರುವ ರಿಕ್ರಿಯೇಷನ್ ಕ್ಲಬ್ನಲ್ಲಿ ಕೆಲವು ದಿನಗಳಿಂದ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕೂಡ್ಲಿಗಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ಹಾಗೂ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ಮಾಡಿ, ರು. 30,515 ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಜಿ ಆಹ್ವಾನ
ಬಳ್ಳಾರಿ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ 4 ವರ್ಷದ ಕಾನೂನು ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಎಲ್ಲ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಂದ ಅರ್ಜಿ ಪಡೆಯಬಹುದು. ಅರ್ಜಿಯನ್ನು ನವೆಂಬರ್ 30ರೊಳಗಾಗಿ ಸಂಬಂಧಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪೂಲಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್-ಬೈಕ್ ಡಿಕ್ಕಿ: ಸವಾರ ಸಾವು
ಹೂವಿನಹಡಗಲಿ: ತಾಲೂಕಿನ ಉತ್ತಂಗಿ ತಾತನ ಮಠದ ಹತ್ತಿರ ಬಸ್ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವು ಕಂಡಿರುವ ದುರ್ಘಟನೆ ನಡೆದಿದೆ. ಉತ್ತಂಗಿ ಗ್ರಾಮದ ಹಡಗಲಿ ಚನ್ನನಗೌಡ (60) ಮೃತ ದುರ್ದೈವಿ. ಗೋಕರ್ಣ ಬಸ್ ಹೊಸಪೇಟೆ ಕಡೆಗೆ ಹೋಗುವಾಗ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನದ ಮೇಲೆ ಹಾಯ್ದಿದೆ. ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಾಕುಮಾರಿ ನಿಧನ: ಸಂತಾಪ
ಬಳ್ಳಾರಿ: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯಾಧ್ಯಕ್ಷೆ ಬಿ.ಎಸ್. ಪ್ರತಿಭಾಕುಮಾರಿ (46) ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಎಐಎಂಎಸ್ಎಸ್ ಬಳ್ಳಾರಿ ಜಿಲ್ಲಾ ಘಟಕ ಸಂತಾಪ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಸಮಿತಿ, ಅವರು ಕೇವಲ 19ನೇ ವಯಸ್ಸಿಗೆ ಸಾಮಾಜಿಕ ಹೋರಾಟಕ್ಕೆ ಆಕರ್ಷಿತರಾಗಿ ಸಂಘಟನೆ ಸೇರಿ, ರಾಜ್ಯಾದ್ಯಂತ ಮಹಿಳೆಯರ ಹಲವಾರು ಜ್ವಲಂತ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದರು. ಸುಮಾರು 26 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಅವರ ಚೈತನ್ಯಶೀಲತೆ, ಸಮಾಜದ ಕುರಿತು ಅವರಿಗಿದ್ದ ಸಮರ್ಪಣಾಭಾವ, ಧ್ಯೇಯನಿಷ್ಠೆ ಇವುಗಳು ಎಲ್ಲರಿಗೂ ಸದಾಕಾಲ ಮಾದರಿಯಾಗುವಂಥದ್ದು. ಮಹಿಳಾ ವಿಮೋಚನೆ ಹೋರಾಟದಲ್ಲಿ ಇನ್ನಷ್ಟು ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಳ್ಳುವುದೇ ಅವರಿಗೆ ನಾವು ನೀಡಬಹುದಾದ ಯೋಗ್ಯ ಶ್ರದ್ಧಾಂಜಲಿ ಎಂದು ಸಂಘಟನೆ ಜಿಲ್ಲಾಧ್ಯಕ್ಷೆ ಮಂಜುಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಲಿಗೆ ಯಂತ್ರ ವಿತರಣೆ
ಬಳ್ಳಾರಿ: ತಾಲೂಕಿನ ಟಿ. ಬೂದಿಹಾಳು ಗ್ರಾಮದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ ಬಡ ಹೆಣ್ಣುಮಕ್ಕಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ಫ್ರಾನ್ಸಿಸ್ ಮಾತನಾಡಿ, ಬಡ ಹೆಣ್ಣುಮಕ್ಕಳು ಹೊಲಿಗೆ ತರಬೇತಿ ಪಡೆದು, ಈ ಹೊಲಿಗೆ ಯಂತ್ರಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು. ಸಂಗನಕಲ್ಲು ಜಿಪಂ ಸದಸ್ಯ ರಾಮುಡು, ಅಮರಾಪುರ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿದೇವಿ ವೆಂಕಟೇಶ, ಸಂಸ್ಥೆಯ ಸಮುದಾಯ ಸಂಯೋಜಕ ದೇವದಾನಂ, ಸಂಸ್ಥೆಯ ಗ್ರಾಮ ಶಿಕ್ಷಣ ಸಮಿತಿ ಅಧ್ಯಕ್ಷ ವೈ. ಗಾದಿಲಿಂಗಪ್ಪ, ವೈದ್ಯಾಧಿಕಾರಿ ಡಾ. ಪ್ರಹ್ಲಾದ್, ಗ್ರಾಮದ ಮುಖಂಡರಾದ ಹನುಮಂತಪ್ಪ, ಲಕ್ಷ್ಮೀ ಸುಂಕಣ್ಣ ಸೇರಿದಂತೆ ಇತರರು ಇದ್ದರು.
ಅರ್ಜಿ ಆಹ್ವಾನ
ಬಳ್ಳಾರಿ: ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯು ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರು ಪಾವತಿ ಮಾಡಲು ಅರ್ಜಿ ಆಹ್ವಾನಿಸಿದೆ. ಸರ್ಕಾರಿ, ಸ್ಥಳೀಯ ಸಂಸ್ಥೆ, ಅನುದಾನಿತ ಸಂಸ್ಥೆ, ಸರ್ಕಾರದ ಮಾನ್ಯತೆ ಪಡೆದ ಅನುದಾನ ಸಹಿತ ಮತ್ತು ಅನುದಾನ ರಹಿತ ಖಾಸಗಿ ಹಾಗೂ ಶುಲ್ಕ ವಿಧಿಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಎಸ್ಎಲ್ಸಿ ನಂತರದ ವಿಕಲಚೇತನ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದು. ಅರ್ಜಿ ಸಲ್ಲಿಸುವ ವಿಕಲಚೇತನರು ಭಾರತದ ಪ್ರಜೆಯಾಗಿದ್ದು, ಕನಿಷ್ಠ 5 ವರ್ಷಗಳಿಂದ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು. ಅರ್ಜಿ ಸಲ್ಲಿಸುವವರು ಹಿಂದಿನ ವರ್ಷದ ಪಬ್ಲಿಕ್ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಉತ್ತಿರ್ಣರಾಗದಿದ್ದಲ್ಲಿ ಮುಂದಿನ ವರ್ಷದಲ್ಲಿ ಶುಲ್ಕ ಮರುಪಾವತಿಗೆ ಅರ್ಹರಾಗುವುದಿಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹಿಂದಿನ ಬಾಕಿ ವಿಷಯಗಳು ಸೇರಿದಂತೆ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ನಂತರದ ವರ್ಷದಲ್ಲಿ ಶುಲ್ಕ ಮರುಪಾವತಿಗೆ ಅರ್ಹರಾಗುತ್ತಾರೆ ಹಾಗೂ ಆ ಕೋರ್ಸಿನಲ್ಲಿ ಕ್ಯಾರಿ ಓವರ್ ಪದ್ಧತಿ ಜಾರಿಯಿದ್ದು, ಮುಂದಿನ ತರಗತಿ, ವರ್ಷಕ್ಕೆ ಪ್ರವೇಶಾವಕಾಶವಿದ್ದಲ್ಲಿ ಅಂತಹವರು ಶುಲ್ಕ ಮರುಪಾವತಿಗೆ ಅರ್ಹರಿರುತ್ತಾರೆ. ಪರೀಕ್ಷಾ ಶುಲ್ಕವನ್ನು ವರ್ಷಕ್ಕೆ ಒಂದು ಸಲ ಮಾತ್ರ ಮರುಪಾವತಿಸಲಾಗುವುದು. ಅನುತ್ತೀರ್ಣ ಹಾಗೂ ಸಪ್ಲಿಮೆಂಟರಿ ತೆಗೆದುಕೊಳ್ಳುವ, ಇನ್ನಿತರ ಮೂಲಗಳಿಂದ ಶುಲ್ಕ ಪಡೆದ ಅಭ್ಯರ್ಥಿಗಳು ಶುಲ್ಕ ಮರುಪಾವತಿಗೆ ಅರ್ಹರಾಗುವುದಿಲ್ಲ. ಈ ಯೋಜನೆ ಸೌಲಭ್ಯ ಪಡೆಯುವ ಅಭ್ಯರ್ಥಿಗಳಿಗೆ ಯಾವುದೇ ಆದಾಯಮಿತಿ ಇರುವುದಿಲ್ಲ. ಆಸಕ್ತ ವಿಕಲಚೇತನರು ತಮ್ಮ ಅರ್ಜಿಯನ್ನು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರ ಮೂಲಕ ಅವರ ಶಿಫಾರಸಿನೊಂದಿಗೆ ನವೆಂಬರ್ 21ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಎಂಆರ್ಡಬ್ಲ್ಯೂಗಳನ್ನು ಅಥವಾ ದೂರವಾಣಿ ಸಂಖ್ಯೆ 08392-267886ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.