ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಗಾಂಧಿಗಿರಿ

Lingaraj Badiger
Updated On : 6 Nov 2013, 11:27 am

ಹೊಸಪೇಟೆ: ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 730 ಸಿಬ್ಬಂದಿಯನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕಿದ್ದು, ಆ ಕಾರ್ಮಿಕರನ್ನು ಪುನಃ ಸೇವೆಗೆ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿ ನ. 6ರಂದು ಬೆಂಗಳೂರಿನ ಕೇಂದ್ರೀಯ ಬಸ್ ನಿಲ್ದಾಣ ಎದುರು ಗಾಂಧಿಗಿರಿ ನಡೆಸಲಾಗುವುದು ಎಂದು ಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಕೆ.ಆರ್. ವಿಜಯಕುಮಾರ್ ತಿಳಿಸಿದ್ದಾರೆ. ಅಧಿಕಾರಿಗಳು ದಬ್ಬಾಳಿಕೆ, ಲಂಚಗುಳಿತನದಿಂದ ಆಡಳಿತ ನಡೆಸುತ್ತಿದ್ದಾರೆ. ನ್ಯಾಯ ಕೇಳಿದರವರ ವಿರುದ್ಧ ಆರೋಪ ಹೋರಿಸಿ ದಂಡ, ಬಡ್ತಿ ಕಡಿತ, ವೇತನ, ಇಳಿಕೆ, ಕೆಲಸ ನಿರಾಕರಣೆ, ಅಕ್ರಮ ವರ್ಗಾವಣೆ ಮೂಲಕ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಶರಣಾಗದವರನ್ನು ವಜಾ ಮಾಡುವ ಹೀನ ಪದ್ಧತಿ ರೂಢಿಸಿಕೊಂಡಿದ್ದಾರೆ. ಹತ್ತು ವರ್ಷಗಳಿಂದ ಸಾರಿಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ವಜಾ ಮಾಡಿದ್ದು, ಅವರನ್ನು ನಂಬಿದ ಕುಟುಂಬಗಳು ಬೀದಿಗೆ ಬಂದಿವೆ. ಈಗಾಗಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಿಎಂ ಲಿಖಿತವಾಗಿ ಸೂಚಿಸಿದ್ದಾರೆ. ನೌಕರರನ್ನು ಕೂಡಲೇ ನೇಮಿಸಿಕೊಳ್ಳುವಂತೆ ಗಾಂಧಿಗಿರಿ ಮೂಲಕ ಒತ್ತಾಯಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಘಕ್ಕೆ ನೇಮಕ
ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಉಪಾಧ್ಯಕ್ಷರು ಹಾಗೂ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ವೆಂಕಟೇಶ್ ಮತ್ತು ಸದಸ್ಯರಾಗಿ ವಿ.ಟಿ. ದಕ್ಷಿಣಾಮೂರ್ತಿ, ಪಿ. ಅಲ್ಲಾ ಬಕ್ಷ ಅವರನ್ನು ಸಂಘದ ಜಿಲ್ಲಾಧ್ಯಕ್ಷ ಡಾ. ಎಂ.ಟಿ. ಮಲ್ಲೇಶ್ ನೇಮಕ ಮಾಡಿದ್ದಾರೆ.

ಮಕ್ಕಳಿಗೆ ಓದುವ ಸಂಸ್ಕಾರ ಅವಶ್ಯಕ: ಲಕ್ಷ್ಮೀಪತಿ
ಹಗರಿಬೊಮ್ಮನಹಳ್ಳಿ: ಅಲೆಮಾರಿ ಜನಾಂಗದ ಮಕ್ಕಳಿಗೆ ಓದುವ ಸಂಸ್ಕಾರ ಅತಿ ಅವಶ್ಯಕ. ಬದಲಾದ ಜೀವನ ಕ್ರಮದಲ್ಲಿ ಬುಡಗ ಜನರೆಲ್ಲರೂ ಒಂದೆಡೆ ನೆಲೆ ನಿಲ್ಲುವ ಪ್ರಕ್ರಿಯೆ ಆರಂಭಿಸಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಆಗಬೇಕಾಗಿದೆ ಎಂದು ತಾಲೂಕು ಸತ್ಸಂಗ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮಿಪತಿ ಅಭಿಪ್ರಾಯಪಟ್ಟರು.
ಪಟ್ಟಣದ ಬುಡಗ ಜನಾಂಗದ ಕಾಲೋನಿಯ ಸಾಯಿಬಾಬಾ ದೇವಸ್ಥಾನದಲ್ಲಿ ಎಸ್ಸಿ-ಎಸ್ಟಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ನೌಕರರ ಜಿಲ್ಲಾ ಸಂಘ ಹಾಗೂ ತಾಲೂಕು ಚಿಲಿಪಿಲಿ ಬಳಗ ಆಯೋಜಿಸಿದ್ದ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಲೆಮಾರಿಯಾಗಿಯೇ ಬದುಕು ರೂಪಿಸಿಕೊಂಡಿರುವ ಬುಡಗ ಜನಾಂಗಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಇನ್ನೂ ಕೂಡ ಮರೀಚಿಕೆಯಾಗಿವೆ. ವಿದ್ಯಾವಂತರಿಲ್ಲದಿರುವುದು ಈ ಹಿಂದುಳಿವಿಕೆಗೆ ಮೂಲ ಕಾರಣ ಎಂದರು. ಹುರುಕಡ್ಲಿ ಶಿವಕುಮಾರ, ಶಿವಾನಂದ ಶಿಶುವಿನಹಳ್ಳಿ ಮಾತನಾಡಿದರು.
ಎಸ್.ಸಿ., ಎಸ್.ಟಿ. ಪ್ರಾಥಮಿಕ ಮತ್ತು ಮಾಧ್ಯಮಿಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ, ಸಂಘದ ತಾಲೂಕಾಧ್ಯಕ್ಷ ಕೊಟ್ರೇಶ, ಯುವಕಥೆಗಾರ ಕೆ.ಎಸ್. ಓಂಪ್ರಕಾಶ್ ದಶಮಾಪುರ, ವೆಂಕಟೇಶ, ಹನುಮಂತಪ್ಪ, ಮೈಲಾರಪ್ಪ ಹಾಗೂ ದೇವಸ್ಥಾನದ ಅರ್ಚಕರಾದ ಶ್ರೀ ಪ್ರಹ್ಲಾದಾಚಾರ್ ಇದ್ದರು. ಕವಿ ಟಿ. ಶೇಕ್ಷಾವಲಿ ಸ್ವಾಗತಿಸಿದರು. ಉಮೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement