ಸಮನ್ವಯತೆ ಕಾಪಾಡಲು ದೀಪೋತ್ಸವ ಸಹಕಾರಿ
ಸಿರುಗುಪ್ಪ: ಅಜ್ಞಾನದಿಂದ ಸುಜ್ಞಾನದಡೆಗೆ ಕೊಂಡೊಯ್ಯುವ ಸಂಕೇತವೇ ದೀಪೋತ್ಸವ, ಇಂತಹ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮದಲ್ಲಿ ಆಯೋಜಿಸುವ ಮೂಲಕ ಸಮನ್ವಯತೆಯನ್ನು ಕಾಪಾಡಲು ಸಹಕಾರಿ ಎಂದು ತೆಕ್ಕಲಕೋಟೆ ಕಂಬಳಿಮಠದ ವೀರಭದ್ರೇಶ್ವರ ಶಿವಾಚಾರ್ಯರು ತಿಳಿಸಿದರು.
ತಾಲೂಕಿನ ಬೂದುಗುಪ್ಪ ಗ್ರಾಮದ ಗುಂಡಿನ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಕಾರ್ತಿಕಮಾಸದ ಅಂಗವಾಗಿ ಲಕ್ಷದೀಪೋತ್ಸವ, ಹಾಗೂ ಮೈಲಾರಲಿಂಗೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಜೀವನ ಶೈಲಿ ಅಭಿವೃದ್ಧಿ: ಅರ್ಯರ ಕಾಲದಿಂದಲೂ ಈ ದೀಪಗಳ ಹಬ್ಬವನ್ನು ಆಚರಿಸುವ ಮೂಲಕ ತಮ್ಮ ಜೀವನದ ಶೈಲಿಯನ್ನು ಅಭಿವೃದ್ಧಿ ಹೊಂದಿರುವ ಸಂಕೇತವಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ, ಈ ಪದ್ದತಿಯನ್ನು ಇಂದಿಗೂ ಅಭಿವೃದ್ಧಿ, ಸುಜ್ಞಾನದ ಸಂಕೇತವಾಗಿ ದೀಪಾವಳಿಯ ನಂತರ ಒಂದು ತಿಂಗಳ ಕಾಲ ಕಾರ್ತಿಕ ಮಾಸವನ್ನು ದೀಪಗಳ ಹಬ್ಬವನ್ನಾಗಿ ಆಚರಿಸಲಾಗುತ್ತದೆ ಎಂದರು.
ಯರ್ರಂಗಳಿ ಮಲ್ಲಪ್ಪತಾತ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರೌಡಕುಂದಿಯ ಡಾ.ಸಿದ್ದರಾಮೇಶ್ವರ ಸ್ವಾಮೀಜಿ, ಹಳೇಕೋಟೆ ಮರಿಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ತೆಕ್ಕಲಕೋಟೆ ಕಾಡಸಿದ್ದೇಶ್ವರ ಮಠದ ಮರಿಸ್ವಾಮಿತಾತ, ಸಿದ್ದರಾಂಪುರ ಚಿದಾನಂದಪ್ಪತಾತ, ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ಬಿ. ಗೋಪಾಲ, ಜಿಪಂ ಸದಸ್ಯ ದಮ್ಮೂರು ಸೋಮಪ್ಪ ಸೇರಿದಂತೆ ಬೂದುಗಪ್ಪ, ತೆಕ್ಕಲಕೋಟೆ, ಸಾವಿರಾರು ಭಕ್ತರು ಉಪಸ್ಥಿತರಿದ್ದರು.