ಅಲ್ಲೀಪುರ ಕೆರೆಗೆ ಶಾಸಕ ಅನಿಲ್ ಲಾಡ್ ಭೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 6
ನಗರದ ಹೊರವಲಯದಲ್ಲಿರುವ ಅಲ್ಲೀಪುರ ಕೆರೆಗೆ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು.
ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಕ್ಕೆ ಕುಡಿಯುವ ನೀರು ಪೂರೈಸುವ ಅಲ್ಲೀಪುರ ಕೆರೆಯಲ್ಲಿ ಇತ್ತೀಚೆಗೆ ತಡೆಗೋಡೆ ಕುಸಿದು ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಹಾಗೂ ಅಲ್ಲೀಪುರ ಜಲಾಶಯದಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಲು ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾಗದಂತೆ ಮತ್ತು ಈಗ ಕೆರೆಯಲ್ಲಿರುವ 3 ಮೀಟರ್‌ನಷ್ಟು ನೀರಿಗೆ ಮತ್ತೆ 3 ಮೀಟರ್ ನೀರು ಅಧಿಕವಾದಾಗ ಒಂದು ವೇಳೆ ಕೆರೆ ದಂಡೆ ಕುಸಿತ ಕಂಡಲ್ಲಿ ಮುಂದಾಲೋಚನೆ ಕ್ರಮ ರೂಪಿಸಲಾಗುವುದು. ಇದೇ ಶನಿವಾರ ತಜ್ಞ ಅಧಿಕಾರಿಗಳು ಕೆರೆಗೆ ಭೇಟಿ ನೀಡಲಿದ್ದಾರೆ ಎಂದರು.
ತಜ್ಞ ಅಧಿಕಾರಿಗಳೊಂದಿಗೆ ಚರ್ಚೆ: ತಡೆಗೋಡೆಯ ದುರಸ್ತಿ ಕಾಮಗಾರಿಗಾಗಿ ಕಾಡು ಕಲ್ಲುಗಳನ್ನು ಬಳಕೆ ಮಾಡಲಾಗಿದೆ. ಅವು ತೂಕ ಕಡಿಮೆ ಇರುತ್ತವೆ. ಅದರಲ್ಲೂ ದುಂಡನೆಯ ಆಕಾರದಿಂದಿವೆ. ಇವು ಕಾಡಿನಲ್ಲಿ ಸಂಗ್ರಹ ಮಾಡಿದ ರೀತಿಯಲ್ಲಿವೆ. ಆದರೆ ಒಳ್ಳೆಯ ತೂಕದ ಉತ್ತಮ ಚೌಕಾಕಾರದ ಕಲ್ಲುಗಳನ್ನು ಬಳಸಿದ್ದರೆ ಕಾಮಗಾರಿ ಉತ್ತಮವಾಗಿರುತ್ತಿತ್ತು. ಆದರೆ ಅಧಿಕಾರಿಗಳಿಗೆ ಇವೇ ಕಲ್ಲುಗಳನ್ನು ಹಾಕುವಂತೆ ಸೂಚಿಸಲಾಗಿದೆ ಎಂದು ತಿಳಿಸುತ್ತಿದ್ದು, ಶನಿವಾರ ಆಗಮಿಸಲಿರುವ ತಜ್ಞ ಅಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ಹೇಳಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಾರ್ವಜನಿಕರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದ ಹಾಗೆ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಲಕ್ಷಾಂತರ ರು. ವೆಚ್ಚದಲ್ಲಿ ಕೈಗೊಂಡ ಕಾಮಗಾರಿ ಸೂಕ್ತ ರೀತಿಯಲ್ಲಿ ನಡೆದಿಲ್ಲ. ಹೀಗಾಗಿ ಎರಡೂವರೆ ಅಡಿಯಷ್ಟು ಕುಸಿತ ಕಂಡಿದ್ದು ಬೇಸರ ಮೂಡಿಸಿದೆ ಎಂದರು.
ಪಾಲಿಕೆ ಆಯುಕ್ತ ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಪರ್ವೀನ್‌ಬಾನು, ಗಾಜುಲ ಶ್ರೀನಿವಾಸ್ ಸೇರಿದಂತೆ ಜಲಮಂಡಳಿ, ಪಾಲಿಕೆ ಅಧಿಕಾರಿಗಳು ಇದ್ದರು.