ಕೋಟ್ಯಂತರ ಮೌಲ್ಯದ ಚಿನ್ನದ ನಾಣ್ಯ ಪತ್ತೆ
ಕಾರಟಗಿ: ನಿಧಿ ದೊರೆತ ಸುಳಿವಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಿದ ಕಾರಟಗಿ ಪೊಲೀಸರು ಕೋಟ್ಯಂತರ ರು. ಮೌಲ್ಯದ ವರಹ(ಚಿನ್ನದನಾಣ್ಯ)ಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿಗೆ ಸಮೀಪದ ದುಂಡಗಿ ಗ್ರಾಮದ ನಿವಾಸಿ ನವೋದರ ಹಾಗೂ ಚಳ್ಳೂರು ಗ್ರಾಮದ ನಿವಾಸಿ ಮಂಜುನಾಥ ಚಳ್ಳೂರು ಎಂಬಿಬ್ಬರನ್ನು ಬಂಧಿಸಿದ್ದು, ಪೊಲೀಸರು ಸುಮಾರು 379 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ನವೋದರ ಮತ್ತು ಮಂಜುನಾಥ ಎಂಬುವರಿಗೆ ವರಹ(ಚಿನ್ನದನಾಣ್ಯ)ಗಳು ದೊರೆತಿವೆ.
ಚಿನ್ನದನಾಣ್ಯಗಳ ಆಕೃತಿ ಗಮನಿಸಿದರೆ ವಿಜಯನಗರ ಕಾಲದ ನಾಣ್ಯಗಳು ಎಂದು ಅಂದಾಜಿಸಲಾಗಿದೆ. ಕಳೆದ ಸುಮಾರು ಒಂದು ತಿಂಗಳ ಹಿಂದೆ ಇವರಿಬ್ಬರು ಹುಳ್ಕಿಹಾಳ-ದುಂಡಗಿ ಗ್ರಾಮದ ಬಳಿಯಿರುವ ಹಿರೇಹಳ್ಳದಲ್ಲಿ ಉಸುಕು ಸಂಗ್ರಹಣೆಗೆ ಗುಂಡಿ ತೋಡಿದಾಗ ಚಿನ್ನದ ನಾಣ್ಯಗಳು ದೊರೆತಿವೆ. ಸುಮಾರು 400 ನಾಣ್ಯಗಳು ದೊರೆತಿದ್ದು ಇಬ್ಬರು ಹಂಚಿಕೊಂಡು ಕೆಲದಿನಗಳ ಕಾಲ ಸುಮ್ಮನಾಗಿದ್ದಾರೆ. ನಂತರ ತೊಂಡಿಹಾಳ ಗ್ರಾಮದ ಶಿವಯೋಗಿವುಠದ ಅಂದಾನಯ್ಯಸ್ವಾಮಿ ಎಂಬುವರಿಗೆ ಇಬ್ಬರೂ ತಲಾ 25 ನಾಣ್ಯಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಕೆಲ ಚಿನ್ನದನಾಣ್ಯಗಳನ್ನು ಕೈಗೆತ್ತಿಕೊಂಡು ನೋಡಿದ್ದು ಸಂಶಯ ಮೂಡಿಸಿದೆ. ಚಿನ್ನದ ನಾಣ್ಯಗಳನ್ನು ನೋಡುತ್ತಿದ್ದಂತೆ ಸಂಶಯದಿಂದ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸುಳಿವು ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಪ್ರಕರಣದ ಜಾಡು ಹಿಡಿದು ಇಬ್ಬರನ್ನು ಬಂಧಿಸಿದ್ದಾರೆ. ಅಷ್ಟರಲ್ಲಿ ಬೇರೆ ವ್ಯಕ್ತಿಗಳಿಗೂ ಕೆಲ ನಾಣ್ಯಗಳನ್ನು ನೀಡಿದ್ದಾರೆ. ನಂತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಉದಯರವಿ ಹಾಗೂ ಸಿಬ್ಬಂದಿಗಳಾದ ಬಿ.ಎಸ್. ಬೋರಣ್ಣವರ್, ವಸಂತ ಇಟಗಿ, ಮಹೇಶ ಪ್ರಕರಣದ ಜಾಡು ಹಿಡಿದು ವಿವಿಧೆಡೆ ವಿಚಾರಿಸಿದ್ದಾರೆ. ನಂತರ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯನ್ವಯ ಮಂಜುನಾಥ ಹಾಗೂ ನವೋದರನ ಮನೆಯಲ್ಲಿ ಹಾಗೂ ಬೇರೆ ವ್ಯಕ್ತಿಯೋರ್ವನಿಂದ 379 ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪಟ್ಟಣ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪೊಲೀಸರ ಕಾಲಹರಣ: ವಿಚಿತ್ರವೆಂದರೆ ಆರೋಪಿಗಳನ್ನು ಬಂಧಿಸಿ 24 ಗಂಟೆಗಳು ಕಳೆದರೂ ಯಾವುದೇ ನಿಶ್ಚಿತ ನಿರ್ಧಾರ ಕೈಗೊಳ್ಳದ ಪೊಲೀಸರು ಕಾಲಹರಣ ನಡೆಸಿದ್ದರಿಂದ ಎರಡೂ ಗ್ರಾಮದ ಗ್ರಾಮಸ್ಥರು ಪೊಲೀಸ್ ಠಾಣೆ ಮುಂದೆ ಠಿಕಾಣಿ ಹೂಡಿದ್ದರು. ಇಬ್ಬರನ್ನೂ ಠಾಣೆಯಲ್ಲಿ ಕೂಡಿಸಿಕೊಂಡಿದ್ದರಿಂದ ಕುಟುಂಬಿಕರನ್ನು ಚಿಂತೆಗೀಡು ಮಾಡಿತ್ತು. ಅಲ್ಲದೆ ಈ ಕುರಿತು 12 ಗಂಟೆಗಳಿಂದ ಮಾಧ್ಯಮಗಳಿಗೂ ಯಾವುದೇ ರೀತಿಯ ಮಾಹಿತಿ ನೀಡಲು ಹಿಂದೇಟು ಹಾಕಿದ್ದು ಗೊಂದಲ ಮೂಡಿಸಿತ್ತು. ಘಟನಾ ಸ್ಥಳಕ್ಕೆ ಡಿಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಸಿಪಿಐ ಪ್ರಭಾಕರ್ ಧರ್ಮಟ್ಟಿ, ಪಿಎಸ್ಐ ಉದಯರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.