ವಿಜಯನಗರ ಕಾಲದ ಚಿನ್ನದ ನಾಣ್ಯ ಪತ್ತೆ
ಕಾರಟಗಿ: ನಿಧಿ ದೊರೆತ ಸುಳಿವಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಿದ ಕಾರಟಗಿ ಪೊಲೀಸರು ಕೋಟ್ಯಂತರ ರುಪಾಯಿ ಮೌಲ್ಯದ ವರಹ(ಚಿನ್ನದನಾಣ್ಯ)ಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿಗೆ ಸಮೀಪದ ದುಂಡಗಿ ಗ್ರಾಮದ ನಿವಾಸಿ ನವೋದರ ಹಾಗೂ ಚಳ್ಳೂರು ಗ್ರಾಮದ ನಿವಾಸಿ ಮಂಜುನಾಥ ಚಳ್ಳೂರು ಎಂಬಿಬ್ಬರನ್ನು ಬಂಧಿಸಿದ್ದು, ಪೊಲೀಸರು ಸುಮಾರು 379 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ನವೋದರ ಮತ್ತು ಮಂಜುನಾಥ ಕಳೆದ ಸುಮಾರು ಒಂದು ತಿಂಗಳ ಹಿಂದೆ ಹುಳ್ಕಿಹಾಳ-ದುಂಡಗಿ ಗ್ರಾಮದ ಬಳಿಯಿರುವ ಹಿರೇಹಳ್ಳದಲ್ಲಿ ಉಸುಕು ಸಂಗ್ರಹಣೆಗೆ ಗುಂಡಿ ತೋಡಿದಾಗ ಚಿನ್ನದ ನಾಣ್ಯಗಳು ದೊರೆತಿದ್ದವು. ಸುಮಾರು 400 ನಾಣ್ಯಗಳು ದೊರೆತಿದ್ದು ಇಬ್ಬರು ಹಂಚಿಕೊಂಡು ಕೆಲವು ದಿನಗಳ ಕಾಲ ಸುಮ್ಮನಿದ್ದರು. ನಂತರ ತೊಂಡಿಹಾಳ ಗ್ರಾಮದ ಶಿವಯೋಗಿವುಠದ ಅಂದಾನಯ್ಯಸ್ವಾಮಿ ಎಂಬುವರಿಗೆ ಇಬ್ಬರೂ ತಲಾ 25 ನಾಣ್ಯಗಳನ್ನು ಮಾರಲು ಮುಂದಾಗಿದ್ದರು. ಆಗ ಈ ನಾಣ್ಯಗಳ ಬಗ್ಗೆ ಸಂಶಯಗೊಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಳಿವು ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಪ್ರಕರಣದ ಜಾಡು ಹಿಡಿದು ಇಬ್ಬರನ್ನು ಬಂಧಿಸಿದ್ದಾರೆ. ಅಷ್ಟರಲ್ಲಿ ಬೇರೆ ವ್ಯಕ್ತಿಗಳಿಗೂ ಕೆಲವು ನಾಣ್ಯಗಳನ್ನು ನೀಡಿದ್ದಾರೆ. ನಂತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಉದಯರವಿ ಹಾಗೂ ಸಿಬ್ಬಂದಿ ಬಿ.ಎಸ್. ಬೋರಣ್ಣವರ್, ವಸಂತ ಇಟಗಿ, ಮಹೇಶ ಪ್ರಕರಣದ ಜಾಡು ಹಿಡಿದು ವಿವಿಧೆಡೆ ವಿಚಾರಿಸಿದ್ದು, ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿಯನ್ವಯ ಮಂಜುನಾಥ ಹಾಗೂ ನವೋದರನ ಮನೆಯಲ್ಲಿ ಹಾಗೂ ಬೇರೆ ವ್ಯಕ್ತಿಯೊಬ್ಬರಿಂದ 379 ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ನಾಣ್ಯಗಳಿಗೆ ಪಟ್ಟಣದ ವಿವಿಧೆಡೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಬಂಧಿಸಿ 24 ಗಂಟೆಗಳಾದರೂ ಯಾವುದೇ ನಿಶ್ಚಿತ ನಿರ್ಧಾರ ಕೈಗೊಳ್ಳದ ಪೊಲೀಸರು ಕಾಲಹರಣ ನಡೆಸಿದರು ಇದರಿಂದ ಎರಡೂ ಗ್ರಾಮಗಳ ಗ್ರಾಮಸ್ಥರು ಠಾಣೆ ಮುಂದೆ ಠಿಕಾಣಿ ಹೂಡಿದ್ದರು. ಇಬ್ಬರನ್ನೂ ಠಾಣೆಯಲ್ಲಿ ಕೂಡಿಸಿಕೊಂಡಿದ್ದರಿಂದ ಕುಟುಂಬಿಕರನ್ನು ಚಿಂತೆಗೀಡು ಮಾಡಿತ್ತು. ಅಲ್ಲದೆ ಈ ಕುರಿತು 12 ಗಂಟೆಗಳಿಂದ ಮಾಧ್ಯಮಗಳಿಗೂ ಯಾವುದೇ ರೀತಿಯ ಮಾಹಿತಿ ನೀಡಲು ಹಿಂದೇಟು ಹಾಕಿದ್ದು ಗೊಂದಲ ಮೂಡಿಸಿತ್ತು.