ಸ್ಥಳೀಯ ಆಡಳಿತಕ್ಕೆ ಹೆದ್ದಾರಿ ಹೊಣೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 6
ರಾಜ್ಯದಲ್ಲಿನ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾಗುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡದೆ ಅದರ ಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಪ್ರಾಧಿಕಾರ ನೋಡಿಕೊಳ್ಳಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಲೋಕೋಪಯೋಗಿ ಇಲಾಖೆ ಈಗಾಗಲೆ ರಾಜ್ಯದ ಎಲ್ಲ ಸ್ಥಳೀಯ ಪ್ರಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಹಸ್ತಾಂತರ ಮಾಡಿದೆ. ಈ ಸುತ್ತೋಲೆಯಿಂದ ಲೋಕೋಪಯೋಗಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆಗಳ ಮಧ್ಯೆ ಶೀತಲ ಸಮರ ನಡೆಯುತ್ತಿದೆ ಎನ್ನಲಾಗಿದೆ.
ಅಧೀನ ಕಾರ್ಯದರ್ಶಿಯಿಂದ ಸುತ್ತೋಲೆ: ಲೋಕೋಪಯೋಗಿ ಇಲಾಖೆ ಅಧೀನ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಸುತ್ತೋಲೆ ಸಂ.ಲೋ.ಇ.41.ಉ.ಕಾ-2013 ದಿನಾಂಕ 03.10.2013ರಂದು ಹೊರಡಿಸಿರುವ ಆದೇಶದಲ್ಲಿ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಅನೇಕ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ವಿವಿಧ ಮಹಾನಗರ, ನಗರ ಮತ್ತು ಪಟ್ಟಣ ಪ್ರದೇಶಗಳ ಮೂಲಕ ಹಾಯ್ದು ಹೋಗುತ್ತಿವೆ. ಈ ಪ್ರದೇಶಗಳಲ್ಲಿನ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಸುಸ್ಥಿತಿಯಲ್ಲಿಡುವುದು, ಸಂಬಂಧಿಸಿದವರೆಲ್ಲರ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಸಾಗುವ ರಸ್ತೆ ಭಾಗವನ್ನು ಸಂಬಂಧಿಸಿದ ಸ್ಥಳೀಯ ಪ್ರಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸ್ಥಳೀಯ ಪ್ರಾಧಿಕಾರಗಳೇ ಅವುಗಳ ನಿರ್ವಹಣೆ, ಅಭಿವೃದ್ಧಿ ಮಾಡಬೇಕು. ಲೋಕೋಪಯೋಗಿ ಇಲಾಖೆ ಈ ರಸ್ತೆಗಳ ಅಭಿವೃದ್ಧಿ, ನಿರ್ವಹಣೆ ಮಾಡಬಾರದೆಂದು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಈ ಸುತ್ತೋಲೆಯನ್ನು ಇಲ್ಲಿನ ಲೋಕೋಪಯೋಗಿ ಇಲಾಖೆ ಹೂವಿನಹಡಗಲಿ ಪುರಸಭೆ ವ್ಯಾಪ್ತಿಗೆ ಒಳಪಡುವ 16.4 ಕಿ.ಮೀ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ಹಸ್ತಾಂತರ ಮಾಡಿದ್ದೇವೆ, ಮುಂದಿನ ಜವಾಬ್ದಾರಿ ಅವರಿಗೆ ಬಿಟ್ಟಿದ್ದು, ಸರ್ಕಾರದ ಆದೇಶವನ್ನು ಪಾಲನೆ ಮಾಡಿದ್ದೇವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಇಇ ಯಮನೂರಪ್ಪ.
ನಮಗೆ ಗೊತ್ತಿಲ್ಲ: ರಸ್ತೆಗಳ ಹಸ್ತಾಂತರ ವಿಚಾರ ತಮಗೆ ಗೊತ್ತಿಲ್ಲ. ಈ ಕುರಿತು ಪೌರಾಡಳಿತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಜತೆಗೆ ಚರ್ಚೆ ಮಾಡದೆ ಹೀಗೆ ಏಕಾಏಕಿ ರಸ್ತೆಗಳನ್ನು ಹಸ್ತಾಂತರ ಮಾಡಿದರೆ ತಾವು ಎಲ್ಲಿಂದ ಅಭಿವೃದ್ಧಿ, ನಿರ್ವಹಣೆ ಮಾಡಬೇಕು? ತಮ್ಮ ಇಲಾಖೆಯಿಂದ ಈ ಕುರಿತು ಯಾವುದೆ ಆದೇಶ ಬಂದಿಲ್ಲ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾ ಖಾನ್.
ಯಾವುದೆ ವಿಷಯ ಚರ್ಚೆಯಾಗದೆ ಏಕಾಏಕಿ ಪತ್ರ ಮುಖೇನ ಈ ರೀತಿ ರಸ್ತೆಗಳನ್ನು ಹಸ್ತಾಂತರ ಮಾಡಿದರೆ, ಯಾವ ರೀತಿ ಕ್ರಮ ಕೈಗೊಳ್ಳಬೇಕು? ಈ ಗೊಂದಲದ ವಿಷಯವನ್ನು ಪೌರಾಡಳಿತ ಇಲಾಖೆಗೆ ತಿಳಿಸಿದ್ದೇವೆ. ಬುಧವಾರ ಸಂಜೆ ವೇಳೆಗೆ ಚರ್ಚೆಯಾಗಿ ತೀರ್ಮಾನ ಕೈಗೊಳ್ಳಬಹುದು ಎಂದು ನೂರುಲ್ಲಾ ಖಾನ್ ಮಾಹಿತಿ ನೀಡಿದರು.
ಹಸ್ತಾಂತರವಾಗಿರುವ ರಸ್ತೆಗಳು
ಅರಭಾವಿ-ಚಳ್ಳಿಕೇರಿ ರಾಜ್ಯ ಹೆದ್ದಾರಿಯ ಬಾಲ ಭವನದಿಂದ ಎಂ.ಪಿ.ಪಿ. ನಗರದವರೆಗೆ, ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯ ತಿಪ್ಪಾಪುರ ಹೊರವಲಯದಿಂದ ಬಂಗಾರಪ್ಪ ನಗರದವರೆಗೆ, ಮಂಡ್ಯ-ಹೂವಿನಹಡಗಲಿ ರಾಜ್ಯ ಹೆದ್ದಾರಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಸರ್ಕಾರಿ ಪದವಿ ಕಾಲೇಜುವರೆಗೆ, ಹೂವಿನಹಡಗಲಿ-ಉತ್ತಂಗಿ ಜಿಲ್ಲಾ ಮುಖ್ಯ ರಸ್ತೆ ವಾಲ್ಮೀಕಿ ವೃತ್ತದಿಂದ ಕಾಯಕ ನಗರದವರೆಗೆ, ಹೂವಿನಹಡಗಲಿ-ಮಾಗಳ-ಹೊಳಲು ಜಿಲ್ಲಾ ಮುಖ್ಯ ರಸ್ತೆಯ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಹೊಸ ಸಾರ್ವಜನಿಕ ಆಸ್ಪತ್ರೆವರೆಗೆ, ಶಾಸ್ತ್ರಿ ವೃತ್ತದಿಂದ ಮದಲಗಟ್ಟಿ ವೃತ್ತದವರೆಗಿನ ಜಿಲ್ಲಾ ಮುಖ್ಯ ರಸ್ತೆಯನ್ನು ಪುರಸಭೆಗೆ ಹಸ್ತಾಂತರ ಮಾಡಲಾಗಿದೆ.
ಸುತ್ತೋಲೆಯಲ್ಲೇನಿದೆ?...
ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ, ವಿವಿಧ ಮಹಾನಗರ, ನಗರ ಮತ್ತು ಪಟ್ಟಣ ಪ್ರದೇಶಗಳ ಮೂಲಕ ಹಾಯ್ದು ಹೋಗುವ ಅನೇಕ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಭಾಗವನ್ನು ಸಂಬಂಧಿಸಿದ ಸ್ಥಳೀಯ ಪ್ರಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ರಸ್ತೆಗಳ ಹಸ್ತಾಂತರ ವಿಚಾರ ತಮಗೆ ಗೊತ್ತಿಲ್ಲ. ಪೌರಾಡಳಿತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಜತೆಗೆ ಚರ್ಚೆ ಮಾಡದೆ ಹೀಗೆ ಏಕಾಏಕಿ ರಸ್ತೆಗಳನ್ನು ಹಸ್ತಾಂತರ ಮಾಡಿದರೆ ತಾವು ಎಲ್ಲಿಂದ ಅಭಿವೃದ್ಧಿ, ನಿರ್ವಹಣೆ ಮಾಡಬೇಕು? ತಮ್ಮ ಇಲಾಖೆಯಿಂದ ಈ ಕುರಿತು ಯಾವುದೇ ಆದೇಶ ಬಂದಿಲ್ಲ.
- ನೂರುಲ್ಲಾ ಖಾನ್, ಪುರಸಭೆ ಮುಖ್ಯಾಧಿಕಾರಿ
-ಚಂದ್ರು ಕೊಂಚಿಗೇರಿ