ಅಕ್ರಮ ಮದ್ಯ: ಓರ್ವ ಬಂಧನ
ಬಳ್ಳಾರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿ, ಬಂಧಿತನಿಂದ 38 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಘಟನೆ ಸಂಗನಕಲ್ ಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಯಿಂದ ವಿವಿಧ ಕಂಪನಿಯ ಸುಮಾರು ರು. 1771 ಮೌಲ್ಯದ ಬಾಟಲಿಗಳನ್ನು ಹಾಗೂ ರು. 250ನಗದು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿ ಗ್ರಾಮೀಣ ಠಾಣೆ ಪಿಎಸ್ಐ ಹೊಸಕೇರಪ್ಪ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿ ನಾಪತ್ತೆ: ದೂರು
ಕೊಟ್ಟೂರು: ಶಿಕ್ಷಕಿಯೊಬ್ಬರು ನಾಪತ್ತೆಯಾಗಿರುವ ಘಟನೆ ಹೊಸಹಳ್ಳಿ ಸಮೀಪದ ಮಾಲೂರಿನಲ್ಲಿ ನಡೆದಿದೆ. ಹೊಸಹಳ್ಳಿಯ ವೈಭವ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಸುಮಾ (18) ನಾಪತ್ತೆಯಾದ ಶಿಕ್ಷಕಿ, 9 ದಿನಗಳ ಹಿಂದೆ ಸಹೋದರನೊಂದಿಗೆ ಕೊಟ್ಟೂರಿಗೆ ಆಗಮಿಸಿದ್ದ ಸುಮಾಳನ್ನು ಸಹೋದರ ವಾಪಾಸ್ ಹೊಸಹಳ್ಳಿಗೆ ತೆರಳಲು ಬಸ್ ಹತ್ತಿಸಿದ್ದು ಅನಂತರ ಶಿಕ್ಷಕಿ ಕಾಣೆಯಾಗಿದ್ದಾರೆ. ಸುಮಾರು 1 ವಾರಗಳ ಕಾಲ ಈಕೆಯ ಸುಳಿವನ್ನು ಜಾಲಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ತಂದೆ ಜಿ. ಪ್ರಕಾಶ್ ಸುಮಾ ಕಾಣೆಯಾಗಿರುವ ಬಗ್ಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಪ್ರಕರಣ ದಾಖಲಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಗುರುರಾಜ್ ಎನ್. ಮೈಲಾರ ತಿಳಿಸಿದರು.
ಇಸ್ಪೀಟ್: 20 ಜನರ ಬಂಧನ
ಕೂಡ್ಲಿಗಿ: ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-13ರ ಬಳಿಯ ಹಳೇ ಹಾಲಿನ ಡೈರಿ ಬಳಿ ಬುಧವಾರ ಇಸ್ಪೀಟ್ ಆಟದಲ್ಲಿ ತೊಡಗಿದ್ದ 20 ಜನರನ್ನು ಬಂಧಿಸಿ, ರು. 14,450 ನಗದು ಮತ್ತು 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಎ. ಕೃಷ್ಣನಾಯ್ಕ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ: ಸವಾರ ಸಾವು
ಕೂಡ್ಲಿಗಿ: ತಾಲೂಕಿನ ನಾಗರಹುಣಿಸೆ ಗ್ರಾಮದ ಬಳಿ ಬುಧವಾರ ಸಂಜೆ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸವಾರ ಸಾವಿಗೀಡಾಗಿ, ಮತ್ತೋರ್ವ ಸವಾರ ಗಾಯಗೊಂಡ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ಪಿಂಡಿ ಮಾರಯ್ಯ (50) ಮೃತ ಸವಾರನಾಗಿದ್ದು, ಸಂಡೂರು ತಾಲೂಕಿನ ಬಿ. ಗೊಲ್ಲರಹಟ್ಟಿ ನಿವಾಸಿ ಚಿತ್ತಪ್ಪ ಗಾಯಗೊಂಡಿದ್ದಾನೆ. ಕೂಡ್ಲಿಗಿಯಿಂದ ಗುಡೇಕೋಟೆ ಕಡೆಗೆ ಬೈಕ್ನಲ್ಲಿ ಹೊರಟಿದ್ದ ಪಿಂಡಿ ಮಾರಯ್ಯನಿಗೆ, ಗುಡೇಕೋಟೆ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ ಎಂದು ಗುಡೇಕೋಟೆ ಪಿಎಸ್ಐ ನವೀನ್ಗೌಡ ತಿಳಿಸಿದ್ದಾರೆ. ಮೃತನ ಮಗ ಶಿವರಾಜ ನೀಡಿದ ದೂರಿನನ್ವಯ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್: ನಾಲ್ವರ ಬಂಧನ
ಕೂಡ್ಲಿಗಿ: ತಾಲೂಕಿನ ಟಿ. ಕಲ್ಲಹಳ್ಳಿಯ ಈಡಿಗರ ನಾಗೇಂದ್ರ ಕಣದ ಹತ್ತಿರ ಬುಧವಾರ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ರು. 1100 ನಗದು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹೊಸಹಳ್ಳಿ ಪಿಎಸ್ಐ ರಘುನಾಥ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗೆ ಲಾರಿ ಡಿಕ್ಕಿ: ಸವಾರ ಸಾವು
ಬಳ್ಳಾರಿ: ಬೈಕ್ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ನಗರದ ಬೆಂಗಳೂರು ರಸ್ತೆಯಲ್ಲಿ ಸಂಭವಿಸಿದೆ. ಮೃತರು ಬಳ್ಳಾರಿಯ ಟ್ರಾನ್ಸ್ಪೋರ್ಟ್ ಏಜೆಂಟ್ ಗಂಗಾಧರ (45).
ಅವರು ಬಳ್ಳಾರಿಯಿಂದ ಬೆಂಗಳೂರು ರಸ್ತೆ ಕಡೆಗೆ ರಮೇಶ್ ಎನ್ನುವ ಸ್ನೇಹಿತನ ಬೈಕ್ನಲ್ಲಿ ಹಿಂದೆ ಕುಳಿತು ಬುಧವಾರ ಸಂಜೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಕೆಳಗೆ ಬಿದ್ದಾಗ ಲಾರಿಯು ಬೈಕ್ನ ಹಿಂದೆ ಕುಳಿತಿದ್ದ ಗಂಗಾಧರ ಅವರ ಮೇಲೆ ಹರಿದಿದೆ. ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಪ್ರಯತ್ನಿಸಿದ ವೈದ್ಯರು ಮೃತ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.