ಇಂದು ತರಬೇತಿ ಶಿಬಿರ
ಹೊಸಪೇಟೆ: ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಷನ್ನಿಂದ ತಾಲೂಕಿನ ಕಮಲಾಪುರದಲ್ಲಿ ಸಂಘಟನಾ ತರಬೇತಿ ಶಿಬಿರ ನ. 8ರಿಂದ 10ರ ವರೆಗೆ ನಡೆಯಲಿದೆ. ಅಂದು ಮಧ್ಯಾಹ್ನ 3ಕ್ಕೆ ಬೆಂಗಳೂರಿನ ನಿಡುಮಾಮಿಡಿ ಮಠದ ಚೆನ್ನಮಲ್ಲ ವೀರಭದ್ರಸ್ವಾಮಿ ಶಿಬಿರ ಉದ್ಘಾಟಿಸುವರು. ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್. ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಎಐಟಿಯುಸಿನ ಎನ್. ಶಿವಣ್ಣ, ಮುರಳೀಧರ್ ಸೇರಿದಂತೆ ಇತರರು ಭಾಗವಹಿಸುವರು. ಅಂಗನವಾಡಿ ನೌಕರರಿಗೆ ತಮ್ಮ ಹಕ್ಕುಗಳು, ಸಾಮಾಜಿಕ, ಸಂಘಟನಾತ್ಮಕ, ಸವಲತ್ತುಗಳು, ಕಾನೂನು ಕುರಿತು ತಿಳುವಳಿಕೆ ಮೂಡಿಸಲಾಗುವುದು ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.
ವೆಂಕಟೇಶ್ಗೆ ಪ್ರಶಸ್ತಿ
ಹಿರೇಕೆರೂರು: ತಾಲೂಕಿನ ಕುಂಚೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಲಾ ಶಿಕ್ಷಕ, ರಂಗ ಕಲಾವಿದ ಈಡಿಗರ ವೆಂಕಟೇಶ್ಗೆ ರಾಜ್ಯ ಮಟ್ಟದ ಬಸವ ಚೇತನ ಪ್ರಶಸ್ತಿ ಲಭಿಸಿದೆ. ನಾಟಕ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ ಬೆಳಗಾವಿ ಜಿಲ್ಲೆ ಅಥಣಿಯ ಚಿನ್ಮಯಿ ಪ್ರಕಾಶನ ಈ ಪ್ರಶಸ್ತಿಗೆ ಅಯ್ಕೆ ಮಾಡಿದೆ. ಮೂಲತಃ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ವೆಂಕಟೇಶ್ ನಳ ದಮಯಂತಿ, ಬಾಹುಬಲಿ, ಸ್ವಾಭಿಮಾನ, ಚಪ್ಪಲಿ ರಾಜ, ರಂಗಭೂಮಿಯ ರತ್ನ, ಕಪ್ಪು ಹೊಳೆಯ ಕಲರವ, ಮನದಾಳ ಮೊದಲಾದ ನಾಟಕಗಳನ್ನು ರಚಿಸುವ ಜತೆಗೆ, ಅಭಿನಯದಲ್ಲೂ ಎತ್ತಿದ ಕೈ. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.
14ರಿಂದ ನಮ್ಮ ಮೈದಾನ ಯೋಜನೆ ಪ್ರಾರಂಭ
ಮುನಿರಾಬಾದ್: ಕೊಪ್ಪಳ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ನಮ್ಮ ಮೈದಾನ ಯೋಜನೆಯನ್ನು ನ. 14ರ ಮಕ್ಕಳ ದಿನಾಚರಣೆಯಂದು ಪ್ರಾರಂಭವಾಗಲಿದೆ ಎಂದು ಜಿಪಂ ಅಧ್ಯಕ್ಷ ಟಿ. ಜನಾರ್ದನ ತಿಳಿಸಿದರು. ಬುಧವಾರ ಮುನಿರಾಬಾದಿನಲ್ಲಿ ಖಾಸಗಿ ಸಮಾರಂಭದಲ್ಲಿ ಭಾಗವಹಿಸಲು ಬಂದಾಗ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎರಡು ಶಾಲೆಗಳ ಮೈದಾನಗಳನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಎನ್ಆರ್ಇಜಿ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿರುವ ಮಕ್ಕಳಿಗೆ ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡುವುದು. ಈಗಾಗಲೇ ಪ್ರತಿಭಾ ಕಾರಂಜಿಯಿಂದ ಗ್ರಾಮೀಣ ಪ್ರದೇಶದಲ್ಲಿನ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ರಾಜ್ಯ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ಸಿಕ್ಕಂತೆ ಮುಂಬರುವ ದಿನದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಶಾಲಾ ಕ್ರೀಡೆಗಳಲ್ಲಿ ಭಾಗವಹಿಸಿಲು ಪ್ರೋತ್ಸಾಹ ದೊರೆಯುತ್ತದೆ ಎಂದರು. ನಮ್ಮ ಮೈದಾನ ಯೋಜನೆಯು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರ ಕನಸಿನ ಕೂಸಾಗಿದೆ. ಇದನ್ನು ಜಿಲ್ಲೆಯ 128 ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದೆಂದು ಜನಾರ್ದನ ತಿಳಿಸಿದರು.