ಜಾಹೀರಾತು ತೆರಿಗೆ ಸಂಗ್ರಹಕ್ಕೆ ನಿರಾಸಕ್ತಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 7
ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಮುಖಂಡರು, ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟ ಜಾಹೀರಾತು ಕಟೌಟ್‌ಗಳು ತಿಂಗಳುಗಟ್ಟಲೇ ನೇತಾಡುತ್ತ ಪಟ್ಟಣದ ಸೌಂದರ್ಯ ಹಾಳು ಮಾಡುತ್ತಿವೆ. ಇತ್ತ ಆ ಕಟೌಟ್‌ಗಳ ಕುರಿತ ನಯಾ ಪೈಸೆ ತೆರಿಗೆಯನ್ನು ವಸೂಲಿ ಮಾಡುವ ಗೋಜಿಗೆ ಪುರಸಭೆ ಹೋಗಿಲ್ಲ.
ಹೌದು, ಹೂವಿನಹಡಗಲಿ ಪಟ್ಟಣ ಪಂಚಾಯಿತಿಯಿಂದ ಪುರಸಭೆ ಅಸ್ತಿತ್ವಕ್ಕೆ ಬಂದಾನಿಂದಲೂ ಇಲ್ಲಿನ ಜನಪ್ರತಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಪುರಸಭೆ ಅಧಿಕಾರಿಗಳ ನಿರಾಸಕ್ತಿಯಿಂದ ಪುರಸಭೆಗೆ ಸಂಗ್ರಹವಾಗಬೇಕಿದ್ದ ಲಕ್ಷಾಂತರ ರು. ತೆರಿಗೆ ಹಣ ನಷ್ಟ ಉಂಟಾಗಿದೆ. ಈ ವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಪುರಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿಲ್ಲ.
ನಿಯಮ ಉಲ್ಲಂಘನೆ: ಪೌರಾಡಳಿತ ನಿಯಮದನ್ವಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಚರ್ಚೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಹಾಕುವ ಕುರಿತು ಬೈಲಾ ತಯಾರು ಮಾಡಬೇಕು. ಮೇಲಧಿಕಾರಿಗಳಿಂದ ಅದನ್ನು ಮಂಜೂರು ಮಾಡಿಸಿಕೊಂಡು, ತಮ್ಮ ವ್ಯಾಪ್ತಿಗೆ ಒಳಪಟ್ಟಿರುವ ಸಾರ್ವಜನಿಕ ಸ್ಥಳ, ವೃತ್ತ ಇನ್ನಿತರ ಸ್ಥಳಗಳಲ್ಲಿ ಜಾಹೀರಾತು ಹಾಕಿದರೆ ಇಂತಿಷ್ಟು ತೆರಿಗೆಯನ್ನು ಪುರಸಭೆಗೆ ಕಟ್ಟಬೇಕೆಂಬ ನಿಯಮ ಪಾಲನೆಯಾಗಿಲ್ಲ.
ತೆರಿಗೆ ಸಂಗ್ರಹಿಸಿಲ್ಲ: ಈ ಕುರಿತು ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್‌ರನ್ನು ಮಾತನಾಡಿಸಿದಾಗ, ಹೂವಿನಹಡಗಲಿ ಪುರಸಭೆಯಲ್ಲಿ ಈ ಕುರಿತು ಬೈಲಾ ತಯಾರು ಮಾಡಿ, ಮಂಜೂರಾತಿ ಪಡೆದು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗುವ ಜಾಹೀರಾತುಗಳಿಗೆ ತೆರಿಗೆ ಹಣ ಸಂಗ್ರಹಿಸಿಲ್ಲ.
ಈಗ ಇದಕ್ಕೆ ಸಂಬಂಧಪಟ್ಟ ಕಾನೂನು ಪ್ರಕಾರ ಬೈಲಾ ತಯಾರಿಸಿದ್ದೇವೆ. ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾದ ಕೂಡಲೆ ಆಯಾ ಸ್ಥಳ, ವೃತ್ತಕ್ಕನುಗುಣವಾಗಿ ದರ ನಿಗದಿ ಮಾಡಿ ತೆರಿಗೆ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಪುರಸಭೆ ನಿಗದಿ ಮಾಡಿರುವ ಸ್ಥಳ ಹೊರತುಪಡಿಸಿ ಬೇರೆಡೆ ಜಾಹೀರಾತು ಕಟೌಟ್ ಹಾಕಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಅಂತಹ ಸ್ಥಳಗಳಲ್ಲಿ ಜಾಹೀರಾತು ನಿಷೇಧಿಸಲಾವುದು. ಜಾಹೀರಾತು ಪ್ರಕಟಣಾ ಫಲಕಕ್ಕೆ ಹಾಕಲಾಗುವ ಜಾಹೀರಾತುಗಳಿಗೆ ತೆರಿಗೆ ಸಂಗ್ರಹ ಪುರಸಭೆಯಿಂದಾಗಲಿ ಅಥವಾ ಗುತ್ತಿಗೆದಾರರಿಗೆ ನೀಡಿ ಆ ಮೂಲಕ ತೆರಿಗೆ ಸಂಗ್ರಹಿಸಲಾಗುವುದು. ಸದ್ಯದಲ್ಲೇ ಇದು ಜಾರಿಗೆ ಬರಲಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ತೆಗೆದುಕೊಂಡು ಇನ್ನು ಮುಂದಾದರೂ ಪಟ್ಟಣದ ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳುವರೆ? ಆ ಮೂಲಕ ತೆರಿಗೆ ಹಣ ಸಂಗ್ರಹಿಸಿ ಪಟ್ಟಣವನ್ನು ಅಭಿವೃದ್ಧಿ ಮಾಡುವರೆ? ಕಾದು ನೋಡಬೇಕು.
ಜಾಹೀರಾತಿಗಾಗಿ ನಿಗದಿಪಡಿಸಿದ ಸ್ಥಳಗಳು
1 ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಿಂದ ಮದಲಗಟ್ಟಿ ವೃತ್ತದ ವರೆಗೆ
2 ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದವರೆಗೆ
3 ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಿಂದ ಬೈಪಾಸ್ ರಸ್ತೆವರೆಗೆ
4 ಮದಲಗಟ್ಟಿ ವೃತ್ತದಿಂದ ಮೈಲಾರಲಿಂಗೇಶ್ವರ ದೇವಸ್ಥಾನದವರೆಗೆ 5 ಎಪಿಎಂಸಿಯಿಂದ ಬೈಪಾಸ್ ರಸ್ತೆವರೆಗೆ
6 ಬೈಪಾಸ್ ರಸ್ತೆ
ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತುಗಳನ್ನು ಅಂಟಿಸಲು ಸ್ಥಳ ನಿಗದಿಪಡಿಸಲಾಗಿದೆ. ಒಂದೊಂದು ವೃತ್ತ ಹಾಗೂ ಸ್ಥಳಗಳಿಗೆ ಒಂದೊಂದು ರೀತಿ ದರ ನಿಗದಿ ಮಾಡಲಾಗುವುದು. ಆ ಪ್ರಕಾರ ಜಾಹೀರಾತು ಅಂಟಿಸಬಹುದು.