ದಿಟ ನಾಗರ ಕಂಡು ಹಾಲೆರೆದರು...
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ನ. 7
ಹಾವು ಕಂಡರೆ ಸಾಕು ಹೊಡಿ, ಬಡಿ ಎನ್ನುವವರೆ ಹೆಚ್ಚು. ಮನುಷ್ಯನ ಕಣ್ಣಿಗೆ ಹಾವು ಎಲ್ಲಿಯೇ ಕಾಣಲಿ, ತೊಂದರೆ ಕೊಡಲಿ, ಬಿಡಲಿ ಬಡಿಗೆಗಳಿಂದ ಆ ಕ್ಷಣದಲ್ಲೇ ಆ ಹಾವನ್ನು ಹೊಡೆದು ಸಾಯಿಸುವುದು ಮಾಮೂಲಿ.
ಆದರೆ ಇಲ್ಲಿ ಹಾವೊಂದು ಮನೆಯೊಂದರಲ್ಲಿ 22 ಗಂಟೆಗೂ ಹೆಚ್ಚುಕಾಲ ಇದ್ದರೂ, ಹೊಡೆದು ಸಾಯಿಸಲಿಲ್ಲ. ಬದಲಾಗಿ ಹಾಲೆರೆದು ಪೂಜೆ ಮಾಡಿ ರಾತ್ರಿಪೂರ ಭಜನೆ ಮಾಡಿ ಅಜ್ಜಯ್ಯನ ಪವಾಡ ಎಂದು ಕೈ ಮುಗಿದು ಧನ್ಯತಾ ಭಾವ ಮೆರೆದರು.
ಹೌದು, ಇಂಥದ್ದೊಂದು ಅಪರೂಪದ ಪ್ರಸಂಗ ಬುಧವಾರ ಕೂಡ್ಲಿಗಿ ತಾಲೂಕಿನ ರಂಗನಾಥನಹಳ್ಳಿ ಗ್ರಾಮದಲ್ಲಿ ನಡೆಯಿತು. ಗ್ರಾಮದ ಗೌರಮ್ಮ ಎಂಬಾಕೆಯ ಮೈಮೇಲೆ ಅಜ್ಜಯ್ಯ ಬರುತ್ತಾನೆ ಎನ್ನುವ ನಂಬಿಕೆ ಇದೆ. ಈಕೆಯ ಮನೆಯೊಳಗೆ ಬಂದ ನಾಗರಹಾವು ಗಂಟೆಗಟ್ಟಲೆ ಕಾದರೂ ಹೊರ ಹೋಗಲಿಲ್ಲ. ಅಲ್ಲದೆ ದೇವರ ಕೋಣೆಯಲ್ಲಿಯೇ ಹಾವು ಕಂಡಿದ್ದರಿಂದ ಅಜ್ಜಯ್ಯನ ಹಾವೆಂದು ಭ್ರಮಿಸಿ ಗೌರಮ್ಮ ಸುದ್ದಿ ಹಬ್ಬಿಸಿದ್ದಾಳೆ. ಕುಳಿತ ಜಾಗದಿಂದ ಜಪ್ಪಯ್ಯ ಎಂದರೂ ಕದಲದೇ ಇದ್ದ ಹಾವನ್ನು ಕಂಡು ಇದೂ ಮಾಮೂಲಿ ಹಾವಲ್ಲ, ದೇವರ ಹಾವೆಂದು ಜನರು ನಂಬಿಬಿಟ್ಟರು.
ಇಡೀ ರಾತ್ರಿ ಭಜನೆ: ರಂಗನಾಥನಹಳ್ಳಿ, ಬಯಲು ತುಂಬರಗುದ್ದಿ, ಬೆಳ್ಳೆಕಟ್ಟೆ, ಜುಟ್ಟಲಿಂಗನಹಟ್ಟಿ ಮುಂತಾದ ಹಳ್ಳಿ ಜನತೆ ಹಾವನ್ನು ನೋಡಲು ಕುತೂಹಲದಿಂದ ಆಗಮಿಸಿದರು. ಕೆಲವರು ಭಕ್ತಿಯಿಂದ ನಾಗರಹಾವಿಗೆ ಕೈ ಮುಗಿದರು. ಮತ್ತೆ ಕೆಲವರು ರಾತ್ರಿಪೂರ ಭಜನೆ ಮಾಡಿ ಭಕ್ತಿ ಅರ್ಪಿಸಿದರು. ಗೌರಮ್ಮನ ಮನೆ ಸುತ್ತಮುತ್ತ ಎಲ್ಲಿ ನೋಡಿದರೂ ಜನಸಾಗರ. ಜನ ಎಷ್ಟೇ ಗಲಾಟೆ ಮಾಡಿದರೂ ನಾಗರಹಾವು ಮಾತ್ರ ಯಾರ ಹಂಗಿಲ್ಲದೆ ತನ್ನ ಉದ್ದನೆ ದೇಹವನ್ನು ಸುರುಳಿ ಆಕಾರದಲ್ಲಿ ಸುತ್ತಿ ಹೆಡೆ ಬಿಚ್ಚಿ ವಿರಾಜಮಾನವಾಗಿ ದಿನ ಪೂರ್ತಿ ಕುಳಿತಲ್ಲೇ ಕುಳಿತು ಬಿಟ್ಟಿತ್ತು. ಒಂದು ಹಗಲು ಒಂದು ರಾತ್ರಿ ಮನೆ ಬಿಟ್ಟು ಕದಲದ ಈ ಹಾವು 22 ತಾಸು ಆದ ನಂತರ ಮನೆಯಿಂದ ಹೊರನಡೆಯಿತು. ಇದೆಲ್ಲ ಅಜ್ಜಯ್ಯನ ಮಹಿಮೆ ಎಂದು ಜನತೆ ಮಾತಾಡಿಕೊಂಡರು. ಜನತೆಯ ಬಾಯಲ್ಲಿ ಹತ್ತಾರು ಕಥೆಗಳು ಹೆಣೆದುಕೊಂಡವು.
ಹುಟ್ಟಿದವು ಹಲವು ಕಥೆಗಳು: ಹಾವಿನ ಗಾತ್ರ, ಹೆಡೆ ಎತ್ತಿರುವ ರೀತಿ ಕಂಡು ಹತ್ತಾರು ರೀತಿಯಲ್ಲಿ ಜನರು ಕಲ್ಪನೆ, ಮಾತುಗಳನ್ನು ಆಡಿದರು. ಈ ಹಾವು ಮೈಮೇಲೆ ಅಜ್ಜಯ್ಯ ಬರುತ್ತಿದ್ದ ಗೌರಮ್ಮನ ಮನೆಯೊಳಗೆ ಯಾಕೆ ಬಂದಿತು. ಅಜ್ಜಯ್ಯದೇವರ ಫೋಟೋ ಇರುವ ಬಳಿಯೇ ಹಾವು ಯಾಕೆ ಕುಳಿತುಕೊಂಡಿದೆ? ಹೆಚ್ಚು ಸಮಯ ಹಾವು ಹೆಡೆ ಎತ್ತುವುದು ಅಪರೂಪ, ಈ ಹಾವು ದಿನಪೂರ್ತಿ ಹೆಡೆ ಎತ್ತಿಯೇ ಇತ್ತು.. ಹೀಗೆ ಹಲವು ಕಥೆಗಳನ್ನು ಜನತೆ ಕಟ್ಟುತ್ತಾ ಸಾಗಿದರು.
ಮನೆಗೆ ಹಾವು ಬಂದ ತಕ್ಷಣ ಗೌರಮ್ಮ ಹಾವಿಗೆ ಪೂಜೆ ಮಾಡಿದ್ದಾಳೆ. ಹಾವಿನ ಮುಂದೆ ತಟ್ಟೆಯಲ್ಲಿ ಕುಡಿಯಲು ಹಾಲು ಇಟ್ಟಿದ್ದಾಳೆ. ಅಕ್ಕಪಕ್ಕದ ಮನೆಯವರು ಪೂಜೆ ನೆರವೇರಿಸಿದ್ದಾರೆ. ಅಲ್ಲದೆ, ರಾತ್ರಿ ಪೂರ ಜನತೆ ನಿದ್ದೆಗೆಟ್ಟು ಭಜನೆ ಮಾಡಿದ್ದಾರೆ. ಜನತೆ ಇದ್ದಾಗಲೆ ಗುರುವಾರ ಬೆಳಗಿನ ಜಾವ ನಾಲ್ಕೈದು ಗಂಟೆಗೆ ಹಾವು ನಿಧಾನವಾಗಿ ಮನೆಯಿಂದ ಹೊರ ಹೋಗಿದೆ. ದೇವರ ಹಾವು ಮಾತ್ರ ಹೀಗೆ ನಿರ್ಭಯದಿಂದ ಇರಲು ಸಾಧ್ಯ ಎಂದು ಗ್ರಾಮದ ತಿಪ್ಪೇಸ್ವಾಮಿ, ಯೋಗೀಶ್ ಮತ್ತಿತರರು ಮನೆಯೊಳಗೆ ಹಾವು ನುಗ್ಗಿದ ಪ್ರಸಂಗದ ಕುರಿತು ಮಾತನಾಡಿದರು.
ಏನೇ ಆಗಲಿ ಈ ಭಾಗದಲ್ಲಿ ಯಾವುದೇ ಹಾವು ಎಲ್ಲಿಯೇ ಕಂಡರೂ ನೋಡು ನೋಡುತ್ತಿದ್ದಂತೆಯೇ ಐದಾರು ಯುವಕರು ಬಡಗಿ ತೆಗೆದುಕೊಂಡು ಹೊಡೆದು ಸಾಯಿಸುತ್ತಾರೆ. ಆದರೆ ಇದೀಗ ಹಾವು ದೇವರ ರೂಪದಲ್ಲಿ ಬಂದಿದೆ ಎಂದು ಭ್ರಮಿಸಿ ಹಾವಿಗೆ ಪೂಜೆ ಮಾಡಿ ಅದರ ಪ್ರಾಣ ಉಳಿಸುವ ಜತೆಗೆ ಅದನ್ನು ಪೂಜ್ಯನೀಯ ಭಾವದಿಂದ ಕಂಡಿದ್ದು ಮಾತ್ರ ಪ್ರಾಣಿಪ್ರಿಯರಿಗೆ, ಹಾವಿಗೆ ಸಂತಸವಾಗಿದೆ.
ಅಮಾವಾಸ್ಯೆಯಂದು ಉಕ್ಕಡಗಾತ್ರಿಗೆ ಹೋಗಿದ್ದೆವು, ವಾಪಾಸ್ ಬಂದ 3ನೇ ದಿನ ನಮ್ಮ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ. ಅಜ್ಜಯ್ಯನ ಒಲುಮೆಯೆ ಇದಕ್ಕೆ ಕಾರಣ. ಈ ಹಿಂದೆ ನಾನು ಬಿಷ್ಣಹಳ್ಳಿಯಲ್ಲಿರುವ ಅಜ್ಜಯ್ಯ ದೇವರಿಗೆ ನಡೆದುಕೊಳ್ಳುತ್ತಿದ್ದೆ, ನಮ್ಮ ಮನೆಯಲ್ಲಿ ಹಾವು ಕಾಣಿಸಿಕೊಂಡಿದ್ದು ಶುಭ ಸಂಕೇತ.
- ಗೌರಮ್ಮ, ಹಾವು ಕಾಣಿಸಿಕೊಂಡ ಮನೆ ಒಡತಿ
-ಭೀಮಣ್ಣ ಗಜಾಪುರ