ರೈತರ ಸಮಸ್ಯೆ ಬಗೆಹರಿಸಲು ಆಗ್ರಹ
ಹೊಸಕೋಟೆ: ಸರಕಾರ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೂತನ ಯೋಜನೆಗಳನ್ನು ಘೋಷಿಸಲು ವಿಫಲವಾದಲ್ಲಿ ಬೆಳಗಾವಿ ಅಧಿವೇಶನಕ್ಕೆ ಲಕ್ಷ ರೈತರು ಮುತ್ತಿಗೆ ಹಾಕುವುದು ಅನಿವಾರ್ಯ ವಾಗಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಗ್ರಾಮಾಂತರ ಜಿಲ್ಲಾ ರೈತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಬದಲಿಗೆ ನಾಡಿನ ಜನರ ಹಣವನ್ನು ಅನ್ನಭಾಗ್ಯ, ಶಾದಿ ಭಾಗ್ಯದಂತಹ ಅಗ್ಗದ ಪ್ರಚಾರ ಯೋಜನೆಗಳಿಗೆ ಬಳಸುತ್ತದೆ. ಸರಕಾರ ಮುಂದಿನ ಬಜೆಟ್ ನಲ್ಲಿ ಶೇ.25ರಷ್ಟು ಹಣವನ್ನು ರೈತರಿಗಾಗಿ ಮೀಸಲಿಟ್ಟು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು. ರಾಜ್ಯದ ಮುಖ್ಯಮಂತ್ರಿಗಳು ಹಿಂದೆ ರೈತರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಅಧಿಕಾರ ವಹಿಸಿಕೊಂಡು 6 ತಿಂಗಳು ಕಳೆದರೂ ಸಮಸ್ಯೆಗಳ ಬಗ್ಗೆ ಮೌನ ತಳೆದಿರುವುದು ಖಂಡನೀಯ ಎಂದರು.
ಸ್ವಾವಲಂಬಿಯಾಗಲು ಸಾಧ್ಯ: ನೀರಾವರಿ ತಜ್ಞ ಚೌಡಪ್ಪ ಮಾತನಾಡಿ,ಕೇಂದ್ರ ಸರಕಾರ ಆಹಾರ ಭದ್ರತೆ ಕಾನೂನು ಜಾರಿಗೊಳಿಸಿದ್ದು, ರಾಷ್ಟ್ರದ 85 ಕೋಟಿ ಜನರನ್ನು ಅಡಿಯಾಳನ್ನಾಗಿಸುತ್ತಿದೆ. ಪರ್ಯಾಯವಾಗಿ ನೀರಾವರಿ ಭದ್ರತೆ ಜಾರಿಗೊಳಿಸಿದಲ್ಲಿ ರೈತರು ಸ್ವಾವಲಂಬಿಗಳಾಗಲು ಸಾಧ್ಯವಾಗಲಿದೆ. ರೈತರು ಸರಕಾರದ ಕಣ್ಣು ತೆರೆಸುವ ಕಾರ್ಯಮಾಡಬೇಕಾದ್ದು ಅತ್ಯವಶ್ಯವಾಗಿದೆ. ಹೊಸಕೋಟೆಯ ದೊಡ್ಡಕೆರೆಗೆ ಮಾರ ಗೊಂಡನಹಳ್ಳಿ ಕೆರೆಯ ನೀರನ್ನು ಹರಿಸಿದಲ್ಲಿ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಆಂಜನೇಯರೆಡ್ಡಿ, ರಾಮಗೌಂಡರ್, ರೈತ ಸಂಘದ ಗ್ರಾಮಾಂತರ ಜಿಲ್ಲಾಧ್ಯಕ್ಷ ವೆಂಕಟನಾರಾಯಣಪ್ಪ, ತಾಲೂಕು ಅಧ್ಯಕ್ಷ ಎ.ಕೆಂಚೆಗೌಡ, ಸುಲೋಚನಮ್ಮ ಉಪಸ್ಥಿತರಿದ್ದರು. ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗೆ ಡಾ.ಜಿ.ಎಸ್.ಪರಮಶಿವಯ್ಯ ಯೋಜನೆ ಜಾರಿಗೊಳಿಸಬೇಕು. ರೇಷ್ಣೆ ಒಳಗೊಂಡಂತೆ ರೈತರ ಎಲ್ಲಾ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಕೃಷಿಗೆ ಪೂರಕವಾದ ಕಾರ್ಖಾನೆಗಳನ್ನು, ಹೂ ಮತ್ತು ಹಣ್ಣು ಬೆಳೆಯುವ ರೈತರ ಉಳಿವಿಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಸ್ಥಾಪಿಸಬೇಕು, ರೈತರಿಗೆ ಕನಿಷ್ಠ 12 ಗಂಟೆ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಬೇಕು, ಜಿಲ್ಲೆಯ ಕೆರೆಗಳಲ್ಲಿ ಅಕ್ರಮ ದಂಧೆ ನಿಲ್ಲಿಸಿ ರಾಜ ಕಾಲುವೆಗಳನ್ನು ತೆರವುಗೊಳಿಸಬೇಕು, ಭೂಸ್ವಾಧೀನದ ಹೆಸರಿನಲ್ಲಿ ಜಮೀನನ್ನು ನೇರವಾಗಿ ಸರಕಾರ ಸ್ವಾಧೀನಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.