ಕಲ್ಲಂಗಡಿ ಕೃಷಿಗೆ ನೂತನ ತಂತ್ರಜ್ಞಾನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 8
ಕೃಷಿ ಬಿಟ್ಟು ಜನರು ನಗರದತ್ತ ಮುಖ ಮಾಡುತ್ತಿದ್ದಾರೆ. ಎಂಬಿಎ ಪದವೀಧರ ರೈತನೊಬ್ಬ, ಕೃಷಿಯಲ್ಲಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಕೇವಲ ತಮ್ಮ ಜಮೀನಿನಲ್ಲಿ ಮಾತ್ರವಲ್ಲದೆ ಇತರ ರೈತರ ಜಮೀನಿನಲ್ಲಿ ಆಧುನಿಕ ಕೃಷಿ ವಿಧಾನ ಅಳವಡಿಸಲು ಹೊರಟಿದ್ದಾರೆ.
ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಲ್ಲಂಗಡಿ ತೋಟಗಾರಿಕೆ ಬೆಳೆಯನ್ನು ಮಲ್ಚಿಂಗ್ ಲೇಯಿಂಗ್ ಮಷಿನ್ ಮೂಲಕ ಮಲ್ಚಿಂಗ್ ಲೇಯಿಂಗ್ ಶೀಟ್ ಅಳವಡಿಸಿ ಹನಿ ನೀರಾವರಿ ಪದ್ಧತಿ ಕೈಗೊಳ್ಳಲು ಶುಕ್ರವಾರ ಮುಂಡ್ರಿಗಿಯಲ್ಲಿ ಮುಂದಾಗಿದ್ದಾರೆ.
ಪರಿಶೀಲನೆ: ರು. 75 ಸಾವಿರ ವೆಚ್ಚದಲ್ಲಿ ಗುಜರಾತಿನಿಂದ ಯಂತ್ರವನ್ನು ಸುಧೀರ್ ಅವರು ಸ್ವತಃ ತಾವೇ ಖರೀದಿಸಿ ತಂದು, ಶುಕ್ರವಾರ ಮೊದಲ ಪ್ರಯತ್ನವನ್ನು ತಾಲೂಕಿನ ಮಂಗಮ್ಮ ಕ್ಯಾಂಪಿನ ವೆಂಕಟ ಸೀತಾರಾಮಯ್ಯ ಜಮೀನಿನಲ್ಲಿ ಮಾಡಿದ್ದಾರೆ. ಇದಕ್ಕೆ ತೋಟಗಾರಿಕೆ ಇಲಾಖೆ ಸಾಥ್ ನೀಡಿದೆ. ಹೊಸ ಪ್ರಯೋಗವಾಗಿದ್ದರಿಂದ ಜಮೀನಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಎಂ. ರಮೇಶ್, ಹಗರಿ ಕೃಷಿ ವಿಜ್ಞಾನ ಕೇಂದ್ರದ ಹೇಮಲತಾ ಅವರು ಭೇಟಿ ನೀಡಿ, ಪರಿಶೀಲಿಸಿದರು.
ಏಕಕಾಲದಲ್ಲಿ ನಾಲ್ಕು ಕೆಲಸ: ಮಲ್ಚಿಂಗ್ ಶೀಟ್ ಅಳವಡಿಸುವ ಕಾರ್ಯ ಮೊದಲಿನಿಂದ ಹನಿ ನೀರಾವರಿ ಪದ್ಧತಿಯಲ್ಲಿ ಇದ್ದರೂ, ಮೊದಲ ಕೃಷಿ ಕಾರ್ಮಿಕರೇ ಮಲ್ಚಿಂಗ್ ಶೀಟ್ ಅಳವಡಿಸುತ್ತಿದ್ದರು. ಇನ್ನು ಕೃಷಿ ಕಾರ್ಮಿಕರು ಶೀಟ್ ಅಳವಡಿಸಲು ಸಮಯ ಹೆಚ್ಚಾಗಿ ಬೇಕಾಗಿತ್ತು. ಬೋದು ಮಾಡಬೇಕು, ನಂತರ ಲ್ಯಾಟ್ರಲ್ (ಹನಿ ನೀರಿನ ಪೈಲ್) ಅಳವಡಿಸಬೇಕು. ಗೊಬ್ಬರ ಹಾಕಬೇಕು, ಅನಂತರ ಮಲ್ಚಿಂಗ್ ಶೀಟ್ ಅಳವಡಿಸಬೇಕು. ಇವೆಲ್ಲವನ್ನು ಕೃಷಿ ಕಾರ್ಮಿಕರು ನಾಲ್ಕು ಹಂತದಲ್ಲಿ ಮಾಡುತ್ತಿದ್ದರು. ಆದರೆ, ಈ ಮಷಿನ್ ಮೂಲಕ ಏಕಕಾಲದಲ್ಲಿಯೇ ಅಳವಡಿಸಲು ಸಾಧ್ಯವಾಗುತ್ತಿದೆ.
ಜಿಲ್ಲೆಯಲ್ಲಿ ಪ್ರಥಮ ಪ್ರಯೋಗ: ಕೃಷಿ ಕಾರ್ಮಿಕರ ಮೂಲಕ ಒಂದು ಎಕರೆಗೆ ಮಲ್ಚಿಂಗ್ ಲೇಯಿಂಗ್ ಶೀಟ್ ಅಳವಡಿಸಲು 2ರಿಂದ 3 ದಿನಗಳ ಬೇಕಾಗುತ್ತಿತ್ತು. ಇದಕ್ಕೆ ರು. 2,000ಕ್ಕೂ ಹೆಚ್ಚು ಖರ್ಚಾಗುತ್ತಿತ್ತು. ಇದೀಗ ಮಲ್ಚಿಂಗ್ ಲೇಯಿಂಗ್ ಶೀಟ್ ಅಳವಡಿಸಲು ಪ್ರಥಮ ಬಾರಿಗೆ ಯಂತ್ರದ ಮೊರೆ ಹೋಗಿದ್ದಾರೆ. ಎಂಬಿಎ ಓದಿದ ರೈತ ಸುಧೀರ್ ಅವರು ಗುಜರಾತಿನಿಂದ ರು. 75 ಸಾವಿರದಲ್ಲಿ ಮಲ್ಚಿಂಗ್ ಲೇಯಿಂಗ್ ಮಷಿನ್ ಖರೀದಿಸಿದ್ದು, ಈ ಮೂಲಕ ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಮುಂದಾಗಿದ್ದಾರೆ. ಟ್ರ್ಯಾಕ್ಟರ್ ಸಹಾಯದಿಂದ ಮಷಿನ ಮೂಲಕ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಕೇವಲ ಪ್ರತಿ ಎಕರೆಗೆ ರು. 1,200ದಿಂದ ರು. 1,500 ವೆಚ್ಚದಲ್ಲಿ ಒಂದು ದಿನಕ್ಕೆ ಮಲ್ಚಿಂಗ್ ಲೇಯಿಂಗ್ ಶೀಟ್ ಅಳವಡಿಸಬಹುದಾಗಿದೆ.
ವಿವಿಧ ಕಾರ್ಯಕ್ಕೆ ಅನುಕೂಲ: ಮಲ್ಚಿಂಗ್ ಲೇಯಿಂಗ್ ಶೀಟ್ಗಳನ್ನು ಬಳಸಿ, ಹನಿ ನೀರಾವರಿ ಮೂಲಕ ತೋಟಗಾರಿಕೆ ಬೆಳೆ ಬೆಳೆಯುವುದರಿಂದ ನೀರಿನ ತೇವಾಂಶ ಹಿಡಿದಿಟ್ಟುಕೊಳ್ಳುವುದು, ಕಳೆ ನಿಯಂತ್ರಣ, ಗುಣಾತ್ಮಕ ಬೆಳೆಗೆ, ರೋಗ ನಿಯಂತ್ರಣ, ಎರೆಹುಳು ಸಂತತಿ ಹೆಚ್ಚಾಗಲು, ಮಣ್ಣಿನ ಸವಕಳಿ ತಡೆಯಲು ಇದು ಸಹಕಾರಿಯಾಗುತ್ತದೆ.
ತೋಟಗಾರಿಕೆ ಬೆಳೆಗಾರರಿಗೆ ಪ್ರೋತ್ಸಾಹ: ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಿ.ಎಂ. ರಮೇಶ್ ಕನ್ನಡಪ್ರಭದೊಂದಿಗೆ ಮಾತನಾಡಿ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ತರಕಾರಿ ಬೆಳೆ ಬೆಳೆಯಲು, ತೋಟಗಾರಿಕೆ ರೈತರಿಗೆ ಪ್ರೋತ್ಸಾಹಿಸಲು ಮುಂದಾಗುತ್ತಿದ್ದು, ರೈತರ ಗುಂಪುಗಳನ್ನು ರಚಿಸಿಕೊಳ್ಳಬೇಕು, ಅದಕ್ಕೆ ರೈತರೊಬ್ಬರು ಅಧ್ಯಕ್ಷರಿದ್ದರೆ, ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ, ಗುಂಪಿನ ಸದಸ್ಯರು ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆಗೆ ಸಬ್ಸಿಡಿ ಪಡೆಯಬಹುದು. ಎಸ್ಸಿ, ಎಸ್ಟಿಗಳಿಗೆ ಶೇ. 50ರಷ್ಟು, ಇತರರಿಗೆ ಶೇ. 40ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಇದೀಗ ಮಲ್ಚಿಂಗ್ ಲೇಯಿಂಗ್ ಶೀಟ್ಗಳ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಲು ಇಲಾಖೆಯಿಂದ ಸಬ್ಸಿಡಿ ನೀಡಲಾಗಿದೆ. ಮಷಿನ್ ಮೂಲಕ ಮಲ್ಚಿಂಗ್ ಲೇಯಿಂಗ್ ಅಳವಡಿಸುವುದು ಜಿಲ್ಲೆಯಲ್ಲಿ ನೂತನ ಪ್ರಯೋಗವಾಗಿದೆ. ಇದನ್ನು ಪ್ರತಿಯೊಂದು ತೋಟಗಾರಿಕೆ ಬೆಳೆಗೆ ಅಳವಡಿಸಬಹುದಾಗಿದೆ ಎಂದರು.
ಇನ್ನೋರ್ವ ರೈತ ವೆಂಕಟಸೀತಾರಾಮಯ್ಯ ಮಾತನಾಡಿ, ಇದೀಗ ಮಲ್ಚಿಂಗ್ ಲೇಯಿಂಗ್ ಮಿಷನ್ನಿಂದ ಒಂದೇ ದಿನದಲ್ಲಿ 10 ಎಕರೆ ಪ್ರದೇಶದಲ್ಲಿ ಮಲ್ಚಿಂಗ್ ಲೇಯಿಂಗ್ ಶೀಟ್ ಅಳವಡಿಸಬಹುದಾಗಿದೆ. ಇದರಿಂದ ಕೂಲಿ ಆಳುಗಳ ಸಮಸ್ಯೆ ಹೋಗಲಾಡಿಸಿದಂತಾಗುತ್ತದೆ. ಇನ್ನು ಹತ್ತಾರು ದಿನಗಳವರೆಗೆ ಶೀಟ್ ಅಳವಡಿಸುವ ಅಗತ್ಯ ಇಲ್ಲ.
ವಿಶೇಷತೆಗಳು...
ೈ ಮಲ್ಚಿಂಗ್ ಶೀಟ್ ಅಳವಡಿಸುವ ಕಾರ್ಯವನ್ನು ಕೃಷಿ ಕಾರ್ಮಿಕರು ನಾಲ್ಕು ಹಂತಗಳಲ್ಲಿ ಮಾಡುತ್ತಿದ್ದರು. ಈ ಯಂತ್ರದಿಂದ ಏಕಕಾಲಕ್ಕೆ ಮಾಡಬಹುದು.
ೈ ರು. 500-800 ವರೆಗೆ ಉಳಿತಾಯ ಮಾಡಬಹುದು.
ೈ ಮಲ್ಚಿಂಗ್ ಲೇಯಿಂಗ್ ಶೀಟ್ ಬಳಸಿ ಹನಿ ನೀರಾವರಿ ಮಾಡುವುದರಿಂದ ತೇವಾಂಶ ಹಿಡಿದಿಟ್ಟುಕೊಳ್ಳಬಹುದು, ಕಳೆ ನಿಯಂತ್ರಿಸಬಹುದು, ಮಣ್ಣಿನ ಸವಕಳಿ ತಡೆಯಬಹುದು.
ಶೀಟ್ ಅಳವಡಿಕೆ ಸುಲಭ
ಕಲ್ಲಂಗಡಿ ಕೃಷಿಗೆ ಸಮಯ, ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ, ಹಣ ಉಳಿತಾಯ ದೃಷ್ಟಿಯಿಂದ ಮಲ್ಚಿಂಗ್ ಲೇಯಿಂಗ್ ಮಷಿನ್ ರೈತಸ್ನೇಹಿ ಯಂತ್ರವಾಗಿದೆ. ತೋಟಗಾರಿಕೆ ಮಾಹಿತಿ ಕೇಂದ್ರದ ಫಣಿರಾಜ್ ಅವರ ಸಲಹೆ ಹಿನ್ನೆಲೆಯಲ್ಲಿ ಗುಜರಾತಿನಿಂದ ಯಂತ್ರ ಖರೀದಿಸಿ ತರಲಾಗಿದ್ದು, ಮಷಿನ್ನಿಂದ ಸರಿಯಾದ ಮಲ್ಚಿಂಗ್ ಲೇಯಿಂಗ್ ಶೀಟ್ಗಳನ್ನು ಅಳವಡಿಸಬಹುದಾಗಿದ್ದು, ಇದರಿಂದ ರೈತರಿಗೆ ಸಹಕಾರಿಯಾಗುತ್ತದೆ.
ಸುಧೀರ್, ಮಷಿನ್ ಖರೀದಿಸಿದ ರೈತ
-ಶಶಿಧರ ಮೇಟಿ