ಅಭಿವೃದ್ಧಿ: ಭೀಮಾನಾಯ್ಕ ಹೆಚ್ಚುಗಾರಿಕೆ ಇಲ್ಲ
ಕೊಟ್ಟೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ಕೊಟ್ಟೂರು ಪಟ್ಟಣದ ಅಭಿವೃದ್ಧಿಗೆ ಬಿಡುಗಡೆಗೊಂಡಿರುವುದರಲ್ಲಿ ಹಾಲಿ ಶಾಸಕ ಭೀಮಾನಾಯ್ಕ ಅವರ ಹೆಚ್ಚುಗಾರಿಕೆ ಏನೂ ಇಲ್ಲ. ಹಿಂದಿನ ಶಾಸಕ ನೇಮಿರಾಜ್ ನಾಯ್ಕ ಅವರ ಅವಧಿಯಲ್ಲಿಯೇ ಈ ಅನುದಾನ ಬಿಡುಗಡೆ ಹೊಸ್ತಿಲಲ್ಲಿ ಬಂದು ನಿಂತಿತ್ತು. ಅನುದಾನ ಬಿಡುಗಡೆಯ ಕ್ರೆಡಿಟ್ ಹಿಂದಿನ ಶಾಸಕರಿಗೆ ಸಲ್ಲುತ್ತದೆ ಎಂದು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಸಿರಿಬಿ ಕೊಟ್ರೇಶ್ ತಿಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜನವರಿ 1ರಂದು ಮಾಜಿ ಶಾಸಕ ನೇಮಿರಾಜ್ ನಾಯ್ಕ ತಮ್ಮ ಅವಧಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರು. 5 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ ಸರ್ಕಾರದಿಂದ ಅನುಮತಿ ಸಹ ಪಡೆದುಕೊಂಡಿದ್ದರು. ಇನ್ನೇನು ಅನುದಾನ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಳ್ಳಬೇಕು ಎನ್ನುವ ಹೊತ್ತಿನಲ್ಲಿ ಪಟ್ಟಣ ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತು. ಹೀಗಾಗಿ ರು. 5 ಕೋಟಿ ಅನುದಾನ ಬಿಡುಗಡೆಗೊಳ್ಳಲು ತಡವಾಯಿತು. ಈ ಸಂಬಂಧ ಸ್ಪಷ್ಟ ಸರ್ಕಾರಿ ಆದೇಶದ ಪ್ರತಿಗಳು ತಮ್ಮ ಬಳಿ ಇವೆ ಎಂದು ಹೇಳಿ ಶಾಸಕ ಭೀಮಾನಾಯ್ಕ ಇದೀಗ ತಾವೇ ಮುಖ್ಯಮಂತ್ರಿಗಳ ಅನುದಾನವನ್ನು ಕೊಟ್ಟೂರಿಗೆ ಮಂಜೂರು ಮಾಡಿಸಿಕೊಂಡಿರುವೆ ಎಂದು ಹೇಳಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದರು.
ಆರೋಪ: ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿಗಳ ಅವಧಿಯಲ್ಲಿ ಎಸ್ಎಫ್ಸಿ ಅನುದಾನದಡಿ ರು. 386.14 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಈ ಅನುದಾನವನ್ನು ಪಟ್ಟಣದ ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಹಂಚಿಕೆ ಮಾಡಲು ಯಾರೂ ಮುಂದಾಗಿಲ್ಲ. ಆಡಳಿತಾಧಿಕಾರಿ ಮತ್ತು ಮುಖ್ಯಾಧಿಕಾರಿಗಳ ಮೇಲೆ ಶಾಸಕರ ಹಿಂಬಾಲಕರು ಪ್ರಭಾವ ಬೀರಿ ಅನುದಾನ ನಮ್ಮವರಿಗೆ ಸೇರದಂತೆ ಸಂಚು ರೂಪಿಸಿ ತಾರತಮ್ಯವೆಸಗಿದ್ದಾರೆ ಎಂದು ಆರೋಪಿಸಿದರು.
ನವೆಂಬರ್ 10ರಂದು ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಎಸ್ಎಫ್ಸಿ ಅನುದಾನದಡಿ ರು. 6 ಲಕ್ಷ ವೆಚ್ಚದ ಕಾಮಗಾರಿಯನ್ನು ತಾವು ಪ್ರತಿನಿಧಿಸುವ ವಾರ್ಡ್ನ ಅಭಿವೃದ್ಧಿಗೆ ಮೀಸಲಿರಿಸಲಾಗಿತ್ತು.
ಆದರೆ, ಆಡಳಿತರೂಢ ಸದಸ್ಯರು, ಕೆಲ ಪ್ರಭಾವಿ ವ್ಯಕ್ತಿಗಳು ವಿಶೇಷ ಸಾಮಾನ್ಯ ಸಭೆ ಕರೆದು ವಿಶೇಷ ಸಭೆಯ ಅಜೆಂಡಾದಲ್ಲಿ ಯಾವುದೇ ವಿಷಯ ಪ್ರಸ್ತಾಪಿಸದೇ ನನ್ನ ವಾರ್ಡ್ಗೆ ಮೀಸರಿಲಿಸಿದ್ದ ರು. 6 ಲಕ್ಷ ಅನುದಾನವನ್ನು ಕಡಿತಗೊಳಿಸಿ ಬೇರೆ ವಾರ್ಡ್ನ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಲು ನಿರ್ಣಯ ಕೈಗೊಳ್ಳುವ ಮೂಲಕ ಪಟ್ಟಣ ಪಂಚಾಯಿತಿ ಅನುದಾನ ತಾವು ಪ್ರತಿನಿಧಿಸುವ ಕ್ಷೇತ್ರದ ಜನತೆಗೆ ತಲುಪಬಾರದು ಎಂಬ ಉದ್ದೇಶವಿರಿಸಿ ವಂಚಿಸತೊಡಗಿದ್ದಾರೆ ಎಂದು ಚಿರಿಬಿ ಕೊಟ್ರೇಶ್ ಆರೋಪಿಸಿದರು.