ಜಂಪ್ರೋಪ್ ಕ್ರೀಡೆಯಿಂದ ದೇಶದ ಕೀರ್ತಿ ಹೆಚ್ಚಿಸಿ: ಮಂಜುನಾಥ ಪ್ರಭು
ಹೊಸಪೇಟೆ: ಜಂಪ್ರೋಪ್(ಹಗ್ಗದಾಟ) ಅತ್ಯಂತ ಕಡಿಮೆ ವೆಚ್ಚದ ಕ್ರೀಡೆಯಾಗಿದ್ದು, ಜಾಣ್ಮೆ ಮತ್ತು ಕ್ರಿಯಾಶೀಲತೆಯಿಂದ ಕ್ರೀಡಾ ಕೌಶಲ್ಯ ಪ್ರದರ್ಶಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಜಂಪ್ರೋಪ್ ಕ್ರೀಡಾಪಟುಗಳಾಗಿ ಬೆಳೆದು ದೇಶಕ್ಕೆ ಕೀರ್ತಿ ತರಲು ಶ್ರಮಿಸಬೇಕು ಎಂದು ತೋರಣಗಲ್ನ ಜಿಂದಾಲ್ ಸ್ಟೀಲ್ನ ಉಪಾಧ್ಯಕ್ಷ ಮಂಜುನಾಥ ಪ್ರಭು ಹೇಳಿದರು. ನಗರದ ತಾಲೂಕು ಕ್ರೀಡಾಂಗಣದ ಬಾಸ್ಕೆಟ್ ಬಾಲ್ ಮೈದಾನದಲ್ಲಿ ರಾಜ್ಯ ಜಂಪ್ರೋಪ್ ಸಂಸ್ಥೆ ಹಾಗೂ ಜಿಂದಾಲ್ ಸ್ಟೀಲ್ಸ್, ವಿಕಾಸ ಗ್ರೂಪ್ ಆಶ್ರಯದಲ್ಲಿ ಶನಿವಾರ ನಡೆದ 10ನೇ ರಾಷ್ಟ್ರೀಯ ಜೂನಿಯರ್ ಜಂಪ್ರೋಪ್ ಚಾಂಪಿಯನ್ ಶಿಪ್-2013 ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಪ್ರಧಾನ ಕಾರ್ಯದರ್ಶಿ ಅಶ್ವತ್ನಾರಾಯಣ ಸ್ವಾಮಿ, ಜಂಪ್ರೋಪ್ ಕ್ರೀಡೆ ಬಗ್ಗೆ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಅಳವಡಿಸಲು ಚಿಂತನೆ ನಡೆಸಲಾಗುತ್ತಿದ್ದು, ಈ ಕುರಿತು ರಾಜ್ಯ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 6,7 ಮತ್ತು 8ನೇ ತರಗತಿಯಲ್ಲಿ ಪಠ್ಯದಲ್ಲಿ ಜಂಪ್ ರೋಪ್ ಕ್ರೀಡೆ ಅಳವಡಿಸುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಜಂಪ್ರೋಪ್ ಕ್ರೀಡೆ ಪರಿಚಯಿಸುವ ಮೂಲಕ ಉತ್ತಮ ಕ್ರೀಡಾಪಟುಗಳನ್ನು ಬೆಳೆಸಬೇಕಾಗಿದೆ ಎಂದರು. ಜಂಪ್ರೋಪ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಸುನೀತಾ ಜೋಷಿ,ರಾಜ್ಯ ಜಂಪ್ರೋಪ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಮಾತನಾಡಿದರು. ಜಿಂದಾಲ್ ಸ್ಟೀಲ್ಸ್ನ ಸಿಎಸ್ಆರ್ ವಿಭಾಗ ಮುಖ್ಯಸ್ಥ ಡಾ. ವಿಶ್ವನಾಥ್ ಪಲ್ಲೆದ, ಕೆ. ನರಸಿಂಹಮೂರ್ತಿ ಅಪ್ಪಣ್ಣ, ಮಹಮ್ಮದ್ ಅರ್ಷಿದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅನಂತ ಜೋಷಿ ಸ್ವಾಗತಿಸಿದರು. ರಮೇಶ್ ಪುರೋಹಿತ್ ವಂದಿಸಿದರು. ಹರೀಷ್ ನಾಯಕ ನಿರೂಪಿಸಿದರು.