ಯಾಜ್ಞವಲ್ಕ್ಯ ಮಹರ್ಷಿಗಳ ಕೊಡುಗೆ ಅಪಾರ: ಶ್ರೀ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 10
ಸನಾತನ ಧರ್ಮಕ್ಕೆ ಯಾಜ್ಞವಲ್ಕ್ಯ ಮಹರ್ಷಿಗಳ ಕೊಡುಗೆ ಅಪಾರ ಎಂದು ಶ್ರೀಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಬಳ್ಳಾರಿಯ ಶ್ರೀಯಾಜ್ಞವಲ್ಕ್ಯ ಸೇವಾ ಸಂಘದಿಂದ ನಗರದ ಶ್ರೀರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀಯೋಗಿಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತಿ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸನಾತನ ಧರ್ಮದ ಸಂಸ್ಕೃತಿ, ಆಚಾರ, ವಿಚಾರಗಳು ಮನುಷ್ಯನ ರಕ್ತದಲ್ಲಿಯೇ ಬಂದಿದ್ದು, ಅದನ್ನು ಯಾವುದೇ ಕಾರಣಕ್ಕೂ ತ್ಯಜಿಸಬಾರದು ಎಂದರು.
ಆಚಾರ, ವಿಚಾರಗಳು ನಂಬಿಕೆ ಮೇಲೆ ನಿಂತಿವೆ. ಅದನ್ನು ತೊಡೆದುಹಾಕುವುದು ಅಷ್ಟು ಸುಲಭವಲ್ಲ. ಆಧ್ಯಾತ್ಮಿಕ ವಿಚಾರಧಾರೆಗಳಿಂದ ಜೀವನದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗಿವೆ ಎಂದು ಹೇಳಿದರು.
ಕಣ್ವಮಠಾಧೀಶ ಶ್ರೀ ವಿದ್ಯಾಭಾಸ್ಕರ ತೀರ್ಥ ಸ್ವಾಮೀಜಿ ಮಾತನಾಡಿದರು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಪ್ತ ಕಾರ್ಯದರ್ಶಿ ರಾಜಾ ಎಸ್. ರಾಜಾಗೋಪಾಲಾಚಾರ್ಯ, ಸಂಸ್ಕೃತ ವಿದ್ಯಾಪೀಠದ ಅಧ್ಯಾಪಕ ಹತ್ತಿಬೆಳಗಲ್ ಕೃಷ್ಣಾಚಾರ್ಯ, ಉಡುಪಿ ಕೃಷ್ಣಾಚಾರ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೀತಾರಾಮಾಚಾರ್ಯ, ಮುಖಂಡರಾದ ಪ್ರಕಾಶ್ ರಾವ್, ವಿಠಲ್, ಕೃಷ್ಣಮೂರ್ತಿ, ರಘುರಾಮ್ ರಾವ್, ಶ್ರೀಧರ್ ರಾವ್, ಸಂದೀಪ್, ಡಣಾಪುರ ಶ್ರೀನಿವಾಸ್, ವಿಜಯ್, ವಿ.ಕೆ. ರವಿ, ವೆಂಕಟೇಶ್, ಮಾರ್ತಾಂಡ ರಾವ್ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಕಣ್ವ ಮಠಾಧೀಶ ಶ್ರೀವಿದ್ಯಾಭಾಸ್ಕರ ತೀರ್ಥ ಸ್ವಾಮೀಜಿಗೆ ಯಾಜ್ಞವಲ್ಕ್ಯ ಸಮಾಜ ಬಾಂಧವರಿಂದ ಕೊಡಮಾಡಿದ ಕಣ್ವಚೇತನ ಬಿರುದನ್ನು ಶ್ರೀಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಪ್ರದಾನ ಮಾಡಿದರು.