ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ
ಕಾರವಾರ: ಕರ್ನಾಟಕ ಮಕ್ಕಳ ಪಕ್ಷ ಹಾಗೂ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಡಿ. 21ರಂದು ಇಲ್ಲಿನ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಕರಾವಳಿ ಸಂಗಮೋತ್ಸವ, ಜಲಕ ದಿಕಲಾಜಾ ಎಂಬ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಿರುವುದಾಗಿ ಕರ್ನಾಟಕ ಮಕ್ಕಳ ಪಕ್ಷದ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ರಾಘುನಾಯ್ಕ ಹೇಳಿದರು. ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷಷ್ಠಿಯಲ್ಲಿ ಮಾತನಾಡಿ, ಈ ಬಾರಿ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗೆ ಈಗಾಗಲೇ ಆಂದ್ರಪ್ರದೇಶ ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ ಆಂದ್ರಪ್ರದೇಶ, ಗೋವಾ ರಾಜ್ಯಗಳಿಂದ ನೃತ್ಯ ತಂಡಗಳು ಆಗಮಿಸಲಿವೆ. ಅಲ್ಲದೆ, ಕರ್ನಾಟಕದ ಐದು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದರು. ನೃತ್ಯ ಸ್ಪರ್ಧೆ ಅಂದು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಉದ್ಯಮಿ ಅಶೋಕ ಖೇಣಿ ಮತ್ತಿತರರು ಆಗಮಿಸಲಿದ್ದಾರೆ. ನೃತ್ಯ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ ರು. 1.50 ಲಕ್ಷ ದ್ವಿತೀಯ 1 ಲಕ್ಷ ಹಾಗೂ ತೃತೀಯ 50 ಸಾವಿರ ಹಾಗೂ ತಲಾ 25 ಸಾವಿರಗಳ ಎರಡು ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರತಿ ತಂಡಕ್ಕೆ 5 ಸಾವಿರ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಊಟ, ಪ್ರಯಾಣ ವೆಚ್ಚ ನೀಡಲಾಗುವುದು ಎಂದು ಅವರು ವಿವರಿಸಿದರು. ಹಾಲಿವುಡ್ ಮೂಲದ ಕಲಾವಿದರಾದ ನಜಿಯಾ ಹಾಗೂ ಜಾನ್ ಎ.ಬೋಸ್ಟನ್ ಹಾಗೂ ಕರ್ನಾಟಕದ ಒಬ್ಬ ಕಲಾವಿದರು ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಲಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಕಾಲಿವುಡ್ನ ಕಲಾವಿದರು ಸಹ ಈ ಸ್ಪರ್ಧೆಗೆ ಆಗಮಿಸಲಿದ್ದಾರೆ. ಇದು ನೃತ್ಯಪಟುಗಳಿಗೆ ಒಂದು ಅತ್ಯುತ್ತಮ ಭೂಮಿಕೆಯಾಗಲಿದೆ ಎಂದರು. ಸುರೇಂದ್ರ ಗಾಂವಕರ, ಸ್ನೇಹಾ ಬಾಡ್ಕರ, ಸಚಿನ್ ಬೋರ್ಕರ್, ಮಹೇಶ ಎಲ್.ಎಚ್., ಸುನೀಲ್ ನಾಯ್ಕ, ಮಹೇಶ್ವರ ಹರಿಕಂತ್ರ ಮತ್ತಿತರರು ಇದ್ದರು.