ನಂಬಿಕೆಗೆ ಧಕ್ಕೆ ತರುವ ಕಾನೂನು ಬೇಡ
ಹಗರಿಬೊಮ್ಮನಹಳ್ಳಿ: ಬಹುಸಂಖ್ಯಾತರ ನಂಬಿಕೆ, ಆಚರಣೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಸರ್ಕಾರ ಕಾನೂನು ರೂಪಿಸಬೇಕೇ ಹೊರತೂ ಜನರ ಭಾವನೆಗಳ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠಾಧೀಶ ವೀರಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಗಡಿ ಗ್ರಾಮ ಹೊಳೆ ಮುತ್ಕೂರಿನಲ್ಲಿ ಶ್ರೀ ಆಂಜನೇಯಸ್ವಾಮಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಉತ್ಸವದ ನಿಮಿತ್ತ ರಾತ್ರಿ ಜರುಗಿದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಶತ, ಶತಮಾನಗಳಿಂದಲೂ ಜನರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕ ಭಾವನೆಗಳಿಗೆ ಇತಿಹಾಸವಿದೆ. ಮೌಢ್ಯ, ಮೂಢನಂಬಿಕೆಗಳನ್ನು ತಡೆ ಹಿಡಿಯುವ ನೆಪದಲ್ಲಿ ಬಹುಸಂಖ್ಯಾತರ ಅಚರಣೆಗಳು, ನಂಬಿಕೆಗಳಿಗೆ ಸರ್ಕಾರ ಅಂಕುಶ ಹಾಕುವುದು ಸರಿಯಲ್ಲ ಎಂದರು.
ಪಂಚಪೀಠಗಳಿಗೆ ಶತಶತಮಾನಗಳಷ್ಟು ಹಳೆಯ ಐತಿಹಾಸವಿದೆ. ಪಂಚಪೀಠಗಳ ಏಳಿಗೆಯನ್ನು ಸಹಿಸಿಕೊಳ್ಳಲು ಆಗದವರು ಅಡ್ಡಪಲ್ಲಕ್ಕಿ ಉತ್ಸವಗಳಿಗೆ ಅಡ್ಡಿಯನ್ನುಂಟು ಮಾಡುವ ಕುತಂತ್ರದಲ್ಲಿ ನಿರತರಾಗಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ಜನರನ್ನು ಹಾದಿತಪ್ಪಿಸುವ ಕೆಲಸವನ್ನು ಇಂತಹ ಶಕ್ತಿಗಳು ಮಾಡುತ್ತಿವೆ. ಜನರು ಇಂಥವರ ಮಾತಿಗೆ ಬೆಲೆ ನೀಡಬಾರದು ಎಂದರು.
ನಾಡಿನ ಅಭಿವೃದ್ಧಿಯಲ್ಲಿ ಪಂಚಪೀಠಗಳ ಪಾತ್ರ ದೊಡ್ಡದಿದೆ. ಶಿಕ್ಷಣ ಸಂಸ್ಥೆಗಳು, ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಜನತೆಯ ಏಳಿಗೆಗಾಗಿ ಪಂಚಪೀಠಗಳು ಶ್ರಮಿಸುತ್ತಿವೆ. ಜಾತ್ಯತೀತ ಪರಿಕಲ್ಪನೆ ಎತ್ತಿಹಿಡಿಯುವ ಪಂಚಪೀಠಗಳ ಏಳಿಗೆಯನ್ನು ಸಹಿಸಿಕೊಳ್ಳಲು ಆಗದವರು ವಿನಾಕಾರಣ ಜನತೆಯಲ್ಲಿ ಹಸಿ ಸುಳ್ಳು ಬಿತ್ತುವ ಮೂಲಕ ಪೀಠಗಳ ಬಗ್ಗೆ ತಪ್ಪುಭಾವನೆ ಮೂಡಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಇದಕ್ಕೂ ಮುನ್ನ ಗ್ರಾಮದ ವಿವಿಧ ರಸ್ತೆಗಳಲ್ಲಿ ರಂಭಾಪುರಿ ಶ್ರೀಗಳ ಭವ್ಯ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ವಿವಿಧ ವಾದ್ಯ ಪರಿಕರಗಳು, ಕಳಸ ಹೊತ್ತ ಮಹಿಳೆಯರು ಭಾಗವಹಿಸಿದ್ದರು. ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರಶ್ರೀ, ಹಳೇ ಹಗರಿಬೊಮ್ಮನಹಳ್ಳಿ ಹಾಲಸ್ವಾಮಿಮಠದ ಹಾಲಶಂಕರಸ್ವಾಮಿ, ಹನಸಿ ಶಂಕರಲಿಂಗಸ್ವಾಮಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶ್ರೀ, ಕೊಟ್ಟೂರಿನ ಹಿರೇಮಠದ ಯೋಗಿರಾಜೇಂದ್ರ, ಬೆಣ್ಣೆಹಳ್ಳಿ ಶ್ರೀಗಳು ಸಭೆಯಲ್ಲಿ ಭಾಗವಹಿಸಿದ್ದರು. ಶಿವಯೋಗಿ ಕಂಬಾಳಿಮಠ ಕಾರ್ಯಕ್ರಮ ನಿರೂಪಿಸಿದರು.