ರೈತರಿಗೆ ಪುಡಿಗಾಸಿನ ಬೆಂಬಲ ಬೆಲೆ: ಚಂದ್ರನಾಯ್ಕ ಆಕ್ರೋಶ
ಹೂವಿನಹಡಗಲಿ: ರೈತಪರ ಕಾಳಜಿ ಮೆರೆದಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರ, ಉತ್ತಿ ಬಿತ್ತಿ ಬೆಳೆದ ಅನ್ನದಾತನ ಆಹಾರ ಧಾನ್ಯಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ ಎಂದು ಮಾಜಿ ಶಾಸಕ ಚಂದ್ರನಾಯ್ಕ ಲೇವಡಿ ಮಾಡಿದರು.
ನ. 17ರಂದು ನಡೆಯುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ರ್ಯಾಲಿಯ ಪೂರ್ವಭಾವಿಯಾಗಿ ತಾಲೂಕಿನ ಸುಕ್ಷೇತ್ರ ಕುರುವತ್ತಿಯಿಂದ ಹಂಪಸಾಗರದ ವರೆಗೂ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಸೋಮವಾರ ಅವರು ಮಾತನಾಡುತ್ತಿದ್ದರು.
ಕಬ್ಬಿಗೆ ರು. 3 ಸಾವಿರ, ಮೆಕ್ಕೆಜೋಳಕ್ಕೆ ರು. 2 ಸಾವಿರ, ಬತ್ತಕ್ಕೆ ರು. 2 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ ಅವರು, ಕ್ಷೇತ್ರದಲ್ಲಿ ಬಡವರಿಗೆ ನೀಡಿದ್ದ ಬಸವ ವಸತಿ ಮನೆಗಳಿಗೆ ಸರಿಯಾಗಿ ಬಿಲ್ ಮಾಡದೆ ಬಿಜೆಪಿ ಕಾರ್ಯಕರ್ತರೆಂಬ ಪೂರ್ವಾಗ್ರಹಪೀಡಿತರಾಗಿ ಸತಾಯಿಸುತ್ತಿದ್ದಾರೆಂದು ದೂರಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಯುವ ಮೋರ್ಚಾದ ಜಯಂತ್ ಮಾತನಾಡಿದರು. ಬೈಕ್ ರ್ಯಾಲಿ ಸುಕ್ಷೇತ್ರ ಕುರುವತ್ತಿ ಬಸವೇಶ್ವರ ಸನ್ನಿಧಾನದಿಂದ ಮೈಲಾರ, ಹೊಳಲು, ಹಿರೇಹಡಗಲಿ, ಹಗರನೂರು, ತಿಪ್ಪಾಪುರ, ಹೂವಿನಹಡಗಲಿ, ಸೋಗಿ, ಉತ್ತಂಗಿ, ಹಂಪಸಾಗರದಲ್ಲಿ ನಡೆಯಿತು. ನೂರಾರು ಬೈಕ್ ಸವಾರರು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಪೂಜೆಪ್ಪ, ವಕ್ತಾರ ಎಂ.ಬಿ. ಬಸವರಾಜ ಸೋಗಿ, ತಾಲೂಕು ಅಧ್ಯಕ್ಷ ಎಂ. ಬಸಣ್ಣ, ಕಾರ್ಯದರ್ಶಿ ಸಂಜೀವ ರೆಡ್ಡಿ, ಬೀರಬ್ಬಿ ಬಸವರಾಜ, ಲೆಂಕೇಶ, ಶಿವಲಿಂಗಪ್ಪ, ಭರಮನಗೌಡ ಮೈಲಾರ ನೇತೃತ್ವ ವಹಿಸಿದ್ದರು.