900 ಭಾಷೆಗಳು ಉಳಿದಿವೆ: ಕಿಕ್ಕೇರಿ ನಾರಾಯಣ
ಹೊಸಪೇಟೆ: ಸಂಸ್ಕೃತಿ ನಿಂತಿರುವುದು ಭಾಷೆ ಮತ್ತು ಪಾಶ್ಚಾತ್ಯ ಏಕಮಾದರಿ ನಡವಳಿಕೆಯ ಮೇಲೆ. ಜಾಗತೀಕರಣದ ಹೊಡೆತಕ್ಕೆ ಅಮೆರಿಕದಲ್ಲಿ 46 ಭಾಷೆಗಳು ಸತ್ತಿವೆ. 2000ನೇ ಇಸವಿಯಲ್ಲಿ 900 ಭಾಷೆಗಳು ಮಾತ್ರ ಉಳಿದಿವೆ ಎಂದು ಭಾಷಾ ಮತ್ತು ಬುಡಕಟ್ಟು ತಜ್ಞ ಡಾ. ಕಿಕ್ಕೇರಿ ನಾರಾಯಣ ಮಾಹಿತಿ ನೀಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದಿಂದ ಮಂಗಳವಾರ ನಡೆದ ಸಂಸ್ಕೃತಿ ಅಧ್ಯಯನದ ಸಮಸ್ಯೆಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾಷೆಗಳು ನಾಶ ಹೊಂದಿದರೆ ಸಂಸ್ಕೃತಿಯೂ ನಾಶವಾಗುತ್ತದೆ. ಆಗ ಆ ಸಂಸ್ಕೃತಿಯಲ್ಲಿ ಅಡಗಿದ್ದ ಜ್ಞಾನ ವ್ಯವಸ್ಥೆಯು ನಾಶವಾಗುತ್ತದೆ. ಇಂತಹ ಬಿಕ್ಕಟ್ಟಿನಲ್ಲಿ ನಾವು ಇದ್ದೇವೆ. 1991ರಲ್ಲಿ ಆದ ಗ್ಯಾಟ್ ಒಪ್ಪಂದದ ಪರಿಣಾಮಗಳನ್ನು ಕುಲಾಂತರಿ ಬೀಜೋತ್ಪಾದನೆ, ಜಾಹೀರಾತು ಸಂಸ್ಕೃತಿ, ಮಾಲ್ ಸಂಸ್ಕೃತಿಗಳಿಂದ ನಮ್ಮೆಲ್ಲರ ಆಹಾರ, ಉಡುಪು, ಆಲೋಚನಾ ಕ್ರಮಗಳು ಹೇಗೆ ಬದಲಾವಣೆಗೊಂಡವು ಎಂಬುದನ್ನು ಅವರು ವಿವರಿಸಿದರು.
ಈ ಎಲ್ಲ ಸಂದರ್ಭಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಹೇಗೆ ಉಳಿಸಿಕೊಳ್ಳುವುದು? ಜಾಗತೀಕರಣದಿಂದ ಒಡೆದು ಚೂರಾದ ಸಂಸ್ಕೃತಿಯನ್ನು ಕಟ್ಟುವುದು ಹೇಗೆ? ನಮ್ಮ ತಿಳಿವಳಿಕೆಯನ್ನು ಬುಡಮೇಲು ಮಾಡುವ ಅನೇಕ ವಿಚಾರ ಸಂಪತ್ತು ಪಾರಂಪರಿಕ ಹಸ್ತಪ್ರತಿಗಳಲ್ಲಿದೆ. ವಸಾಹತುಶಾಹಿಯು ನಮ್ಮಲ್ಲಿ ಕೀಳರಿಮೆ ಬಿತ್ತಿದೆ. ಮೊದಲು ನಾವು ಕೀಳರಿಮೆಯಿಂದ ಹೊರಬರಬೇಕು. ಜಾಗತೀಕರಣದಲ್ಲಿ ಎದುರಾಳಿ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಸ್ಥಳೀಯ ಜ್ಞಾನ ಸಂಪತ್ತನ್ನು ಉಪಯೋಗಿಸಿ ಜಾಗತೀಕರಣದ ವಿರುದ್ಧ ಹೋರಾಡಬಹುದು. ಈ ನಿಟ್ಟಿನಲ್ಲಿ ಸಂಶೋಧಕರು ಸಂಶೋಧನೆಗೆ ಮುಂದಾಗಬೇಕು ಎಂದು ತಿಳಿಸಿದರು.
ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಸ್ವಾಗತಿಸಿದರು. ಡಾ.ಕೆ. ರವೀಂದ್ರನಾಥ ವಂದಿಸಿದರು. ವಿದ್ಯಾರ್ಥಿನಿ ರಾಜಶ್ರೀ ಪಾಟೀಲ್ ನಿರೂಪಿಸಿದರು.