ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಹಿಳೆ, ಮಕ್ಕಳ ಸಾಗಾಣಿಕೆ ತಡೆಯಿರಿ

Lingaraj Badiger
Updated On : 13 Nov 2013, 10:46 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 12
ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ನಿರ್ಮೂಲನೆಗೆ ಸಾರ್ವಜನಿಕರೆಲ್ಲರು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಶ್ವೇಶ್ವರ ಭಟ್ ಕರೆ ನೀಡಿದರು.
ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಿರ್ಮೂಲನೆ ಕುರಿತು ಕಾನೂನು ಅರಿವು ಮೂಡಿಸಲು ಮಂಗಳವಾರ ಏರ್ಪಡಿಸಿದ್ದ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಅವರ ಹತ್ತಿರದ ಸಂಬಂಧಿಕರಿಂದ, ಪರಿಚಿತ, ವಿಶ್ವಾಸವಿರುವವರಿಂದ ಹೆಚ್ಚಾಗಿ ನಡೆಯುತ್ತಿವೆ ಎಂದು ಅಧ್ಯಯನ ತಿಳಿಸುತ್ತವೆ. ನಂಬಿಸಿ ಕರೆದೊಯ್ದು ಮೋಸ ಮಾಡಿದ ಪ್ರಕರಣಗಳು ಸಾಗಾಣಿಕೆ ಪ್ರಕರಣದಡಿ ಬರುತ್ತವೆ. ಇಂತಹ ಪ್ರಕರಣಗಳು ವರದಿಯಾಗಿರುವುದರಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಇತ್ತೀಚೆಗೆ ಒಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೃಢಪಡಿಸಲು ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ದೂರು ನೀಡಲು ಮುಂದಾಗುತ್ತಿಲ್ಲ. ಸಾಕ್ಷಿ ಕೊರತೆ ಕಂಡು ಬರುತ್ತವೆ. ನ್ಯಾಯಾಲಯಗಳಿಗೆ ಸಾಕ್ಷಿ ಪ್ರಮುಖವಾಗಿರುವುದರಿಂದ ಸಾರ್ವಜನಿಕರು ಮಾಧ್ಯಮಗಳಿಗೆ ಮಾಹಿತಿ ನೀಡುವ ಮಾದರಿಯಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಮುಂದಾಗಬೇಕು ಎಂದರು.
ಜಿಲ್ಲಾದ್ಯಂತ ವಿಸ್ತರಣೆ: ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಕೆ. ಬಾಬ ಮಾತನಾಡಿ, ಹೆಣ್ಣು ಮಕ್ಕಳಿಗೆ ಹುಟ್ಟಿದ ಕ್ಷಣದಿಂದ ತಾರತಮ್ಯ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಮಹಿಳೆಯರ ರಕ್ಷಣೆಗಾಗಿ ದುರ್ಗಾ ವಾಹಿನಿ ಸೇವೆ ಜಾರಿಗೊಳಿಸಲಾಗಿದೆ. ಪ್ರತಿದಿನ ಸರಾಸರಿ 20 ಕರೆಗಳು ಬರುತ್ತಿವೆ. ಈ ಸೇವೆಯನ್ನು ಜಿಲ್ಲಾದ್ಯಂತ ವಿಸ್ತರಿಸಲು ಅನುಕೂಲವಾಗುವಂತೆ  ಜಿಲ್ಲಾಧಿಕಾರಿ ಬಿಸ್ವಾಸ್ ವಾಹನಗಳನ್ನು ಒದಗಿಸುತ್ತಿದ್ದಾರೆ. ಶೀಘ್ರ ಜಿಲ್ಲಾದ್ಯಂತ ವಿಸ್ತರಿಸಲಾಗುವುದು. ಕಾಣೆಯಾದ ಮಕ್ಕಳ ಪತ್ತೆಗಾಗಿ ಮಿಸ್ಸಿಂಗ್ ಬ್ಯೂರೋ ಸ್ಥಾಪಿಸಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪಿ. ಸಿದ್ದಾರೆಡ್ಡಿ ಹಾಗೂ ಡಿವೈಎಸ್ಪಿ ಮರುಗಣ್ಣನವರ್, ಜಿಪಂ ಸಿಇಒ ಮಂಜುನಾಥ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಲತಾ, ವಕೀಲರ ಸಂಘದ ಕಾರ್ಯದರ್ಶಿ ಬಿ. ರಾಮಕೃಷ್ಣ ಇದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲಾದಗಿ ಸ್ವಾಗತಿಸಿದರು. ಸೋಮಶೇಖರ್ ನಿರೂಪಿಸಿದರು. ಚಂದ್ರನಾಯ್ಕ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement