ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ

Lingaraj Badiger
Updated On : 13 Nov 2013, 10:39 am

ಹೂವಿನಹಡಗಲಿ: ಹಿಂದೂ- ಮುಸ್ಲಿಂ ಭಾವೈಕ್ಯತೆಯ ಸಂಕೇತ ಸಾರುವ ಮೊಹರಂ ಹಬ್ಬವನ್ನು ಮುಸ್ಲಿಮರಿಲ್ಲದ ಊರುಗಳಲ್ಲಿ ಹಿಂದೂಗಳೇ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ.
ತಾಲೂಕಿನ ಬ್ಯಾಲಹುಣ್ಸಿ, ಹಾಳ್‌ತಿಮ್ಮಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮುಸ್ಲಿಮರಿಲ್ಲ. ಇಲ್ಲಿ ಇಂದಿಗೂ ಹಿಂದೂಗಳೇ ಮುಸ್ಲಿಂ ಪದ್ಧತಿಯಂತೆ ಹಸನ್- ಹುಸೇನ್ ತ್ಯಾಗ ಬಲಿದಾನದ ಸಂಕೇತ ಸಾರುವ ಮೊಹರಂ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಣೆ ಮಾಡುತ್ತಾರೆ.
ನ. 14 ಮೊಹರಂನ ಕೊನೆ ದಿನದಂದು ರಾತ್ರಿ ಎಲ್ಲರ ಮನೆಯಲ್ಲಿ ಗೋದಿ ಮಾದ್ಲಿ, ಸಕ್ಕರೆಯನ್ನು ಮುಲ್ಲಾ ಸಾಹೇಬ್‌ನಿಂದ ಓದಿಸಿಕೊಂಡು ಬರುತ್ತಾರೆ. ಅನಂತರ ರಾತ್ರಿ 12 ಗಂಟೆಗೆ ಮಸೀದಿ ಮುಂದಿರುವ ಕುಣಿಯಲ್ಲಿ ಹಾಕುವ ಬೆಂಕಿಯಲ್ಲಿ ಯುವಕರು ಹಾಯ್ದು ಮಸೀದಿಯಲ್ಲಿರುವ ದೇವರುಗಳನ್ನು ಹಿಡಿದು ಊರು ಸುತ್ತುತ್ತಾರೆ. ಹಲೆ ಕುಣಿಯಲ್ಲಿರುವ ಬೆಂಕಿಯಲ್ಲಿ ಬಂಡಿ ಗಾಲಿಯ ಅಚ್ಚು ಕಾಯಲು ಹಾಕಿ ಸಂಪೂರ್ಣ ಕಾದ ನಂತರ ಯುವಕರು ಪವಾಡಗಳನ್ನು ಮಾಡುವುದು. ಬೆಂಕಿಯಂತೆ ಕಾದ ಅಚ್ಚನ್ನು ಕಿತ್ತು ಹೊರಗೆ ಹಾಕುವ ಪವಾಡಗಳು ನಡೆಯುತ್ತವೆ.
ಮೊಹರಂ ಹಿನ್ನೆಲೆ: ಇಸ್ಲಾಂ ಕೊನೆಯ ಪ್ರವಾದಿ ಹಜರತ್ ಪೈಗಂಬರ್ ಕುಟುಂಬ ಧರ್ಮಕ್ಕಾಗಿ ಕರ್ಬಾಲ ಮೈದಾನದಲ್ಲಿ ತನ್ನ ಕುಟುಂಬದ ಜನರನ್ನು ಬಲಿದಾನ ಮಾಡುವ ಮೂಲಕ ಇಸ್ಲಾಂ ಜೀವಂತವಾಗಿ ಇರುವಲ್ಲಿ ಪ್ರಮುಖ ಪಾತ್ರವಹಿಸಿದ ಪ್ರವಾದಿ ಮೊಮ್ಮಗ ಇಮಾಮ್ ಹಸನ್, ಇಮಾಮ್ ಹುಸೇನ್ ಇವರ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ.
ಕರ್ಬಾಲ ಮೈದಾನದಲ್ಲಿ ಮೊಹರಂ ಮೊದಲನೆ ದಿನದಿಂದ ಹತ್ತನೇ ದಿನದವರೆಗೆ ಯಜೀದ್ 22 ಸಾವಿರ ಸೈನಿಕರು ಕರ್ಬಾಲ ಮೈದಾನದಲ್ಲಿ ಇಮಾಮ್ ಹಸನ್, ಇಮಾಮ್ ಹುಸೇನ್ ಕುಟುಂಬದ ಜನರನ್ನು ಹತ್ಯೆ ಮಾಡಿದ ಘಟನಾವಳಿ ಹಿನ್ನೆಲೆ ಹೊಂದಿರುವ ಮೊಹರಂನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ.
50-60 ವರ್ಷಗಳಿಂದ ಈ ಗ್ರಾಮದಲ್ಲಿ ಗುರು ಹಿರಿಯರು ಸೇರಿ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮೂರಲ್ಲಿ ಮುಸ್ಲಿಮರು ಇಲ್ಲದಿದ್ದರೂ ಪಕ್ಕದ ಮಕರಬ್ಬಿ ಗ್ರಾಮದಿಂದ ಪಿಂಜಾರ್ ಫಕ್ಕೀರ್‌ಸಾಬ್ ಎಂಬ ಮುಲ್ಲಾನನ್ನು ಕರೆ ತಂದು ದೇವರು ಇಡುವುದು. ಸಕ್ಕರೆ ಓದುಸುವುದು ಹಾಗೂ ಉಡಿ ತುಂಬುವ ಕಾರ್ಯ ಮಾಡುತ್ತೇವೆ. ಮೊಹರಂ ಪ್ರಯುಕ್ತ ಯಾವ ವರ್ಷವೂ ಗಲಾಟೆ ನಡೆದಿಲ್ಲ. ಶಾಂತಿಯುತವಾಗಿ ನಡೆಯುತ್ತಿದೆ ಎನ್ನುತ್ತಾರೆ ವಿನಾಯಕ, ಗುರುರಾಜ ಬ್ಯಾಲಹುಣ್ಸಿ.
ಹರಕೆ ಹೊತ್ತವರು: ಮೊಹರಂ ಹಬ್ಬದ ಮುನ್ನ ಹುಲಿವೇಷ ಸೇರಿದಂತೆ ನಾನಾವೇಷಗಳಿಂದ ದೇವರಿಗೆ ಹರಕೆ ತೀರಿಸುತ್ತಾರೆ. ತದನಂತರ ಕೆಲವರು 3-5 ದಿನ ಫಕ್ಕೀರರಾಗುತ್ತಾರೆ. ಕೈಗೆ ಲಾಡಿಗಳನ್ನು ಕಟ್ಟಿಕೊಂಡು ಮೊಹರಂ ಕೊನೆಯ ದಿನದವರೆಗೂ ಹರಕೆ ತೀರಿಸುತ್ತಾರೆ. ಹಲೆ ಕುಣಿಯ ಬೆಂಕಿಯಲ್ಲಿ ಉಪ್ಪು ಹಾಕುವುದರಿಂದ ಮನೆಯ ಜಾನುವಾರುಗಳಿಗೆ ಉಣ್ಣೆ ಆಗುವುದಿಲ್ಲವೆಂಬ ನಂಬಿಕೆ ಜನರದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement