ಮೂಲ ವಿಜ್ಞಾನದ ಆಸಕ್ತಿ ಬೆಳೆಸಿಕೊಳ್ಳಿ
ಬಳ್ಳಾರಿ: ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಡೆ ಆಕರ್ಷಿತರಾಗಬೇಕು, ವೈಜ್ಞಾನಿಕ ಸಂಶೋಧನೆಯನ್ನು ವೃತ್ತಿಯಾಗಿಸಿ ದೇಶದ ಹೆಮ್ಮೆಯ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದು ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್. ಮಂಜುನಾಥ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಬಳ್ಳಾರಿಯ ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿಯಿಂದ ಆಯೋಜಿಸಿದ್ದ ಮೇಡಂ ಕ್ಯೂರಿ ಅವರ 146ನೇ ಜನ್ಮದಿನ ಮತ್ತು ಸರ್. ಸಿ.ವಿ. ರಾಮನ್‌ರ 125ನೇ ಜನ್ಮದಿನದ ನಿಮಿತ್ತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಮೇಡಂ ಕ್ಯೂರಿ ಮತ್ತು ರಾಮನ್ ಎಲ್ಲ ದೇಶ ಮತ್ತು ಎಲ್ಲ ಕಾಲಗಳಿಗೆ ಮಾದರಿ ವಿಜ್ಞಾನಿಗಳು. ಇವರ ಜೀವನ ಚರಿತ್ರೆಗಳು ಯುವಜನರಿಗೆ ಸ್ಫೂರ್ತಿದಾಯಕ. ಕ್ಯೂರಿ ಅವರು ಸಂಶೋಧಿಸಿದ ರೇಡಿಯಂ ಇಂದಿಗೂ ಕ್ಯಾನ್ಸರ್‌ನಂಥ ಮಾರಣಾಂತಿಕ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ವಿಕಿರಣಶೀಲ ಪದಾರ್ಥಗಳ ಸಂಶೋಧನೆಯಲ್ಲಿ ಇಡೀ ಜೀವನ ಸವೆಸಿ ಹೊಸ ದಾಖಲೆಗಳನ್ನೇ ನಿರ್ಮಿಸಿದರು ಎಂದರು. ವಿಜ್ಞಾನಿ ಸರ್. ಸಿ.ವಿ. ರಾಮನ್ ಅವರ ಆವಿಷ್ಕಾರವೇ ರಾಮನ್ ಪರಿಣಾಮ. ಸಾವಿರಾರು ರಸಾಯನಿಕ ಸಂಯುಕ್ತಗಳ ಅಣು ರಚನೆಗಳನ್ನು ತಿಳಿಸುವಲ್ಲಿ ಇದು ಯಶಸ್ವಿಯಾಗಿದೆ. ಬೆಳಕಿನ ಚದರುವಿಕೆಯ ಅವರ ಈ ಸಂಶೋಧನೆಗಾಗಿ ನೋಬೆಲ್ ಪ್ರಶಸ್ತಿ ಗಳಿಸಿದ್ದು, ಈ ಗೌರವ ಪಡೆದ ಭಾರತದ ಪ್ರಥಮ ವಿಜ್ಞಾನಿ ಎನಿಸಿದ್ದಾರೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಸುಶೀಲಾ ಪತ್ತಾರ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ಕಿಶೋರ್, ಶೈಲಜಾ, ಸುಜಾತಾ, ಜ್ಯೋತಿರಾಣಿ, ಸತ್ಯವತಿ, ಸುಮಾ, ಓಂಕಾರ ಗೌಡ, ತಿಪ್ಪೇರುದ್ರ ಇತರರಿದ್ದರು. ಅಕಾಡೆಮಿಯ ಡಾ. ಬಿ.ಎಂ. ಶಿವಶಾಂತಲ ನಿರೂಪಿಸಿದರು. ಶಿಕ್ಷಕಿಯರಾದ ಗೌರಿ ಸ್ವಾಗತಿಸಿದರು. ಸುಲೋಚನ ವಂದಿಸಿದರು.