ಶೀಘ್ರ ಖಾತ್ರಿ ಕ್ರಿಯಾಯೋಜನೆ ಸಿದ್ಧಪಡಿಸಿ: ಶೋಭಾ
ಬಳ್ಳಾರಿ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 15 ವಿವಿಧ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಶೀಘ್ರ ಸಿದ್ದಪಡಿಸಿ ಅನುಮೋದನೆಗೆ ಸಲ್ಲಿಸಿ ಎಂದು ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನುವಾರಿಗೆ ಕಾಲುಬಾಯಿ ಬೇನೆ ಉಲ್ಬಣವಾಗದಂತೆ ಲಸಿಕೆ ಹಾಕಿ, ಮರಣ ಹೊಂದಿದ ಜಾನುವಾರು ಮಾಲೀಕರಿಗೆ ಪರಿಹಾರ ನೀಡಬೇಕು. ಹೊರ ಜಿಲ್ಲೆ, ರಾಜ್ಯಗಳ ಜಾನುವಾರಿನಿಂದಲೂ ರೋಗ ಹರಡುವ ಸಾಧ್ಯತೆ ಇದೆ. ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಕನಕ ಬಿಟಿ ಹತ್ತಿ ಬೀಜ ಬಿತ್ತಿದ ರೈತರಿಗೆ ನಷ್ಟವಾಗಿದ್ದು, ಅಂಥ ರೈತರಿಗೆ ಪರಿಹಾರ ನೀಡಲು ಸೂಚಿಸಿದರು.
ಮುಂಜಾಗ್ರತೆ ವಹಿಸಿ: ನೆನೆಗುದಿಗೆ ಬಿದ್ದಿರುವ ಕುಡಿತಿನಿ ಮತ್ತು ಮಿಂಚೇರಿ ಕೆರೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗಳಿಸಿ, ನೀರು ತುಂಬಿಸಬೇಕು. ಕುಡಿವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು. ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸಲು ಸೂಚಿಸಿದರು.
ಕ್ರಮಬದ್ಧವಾಗಿ ಕಾಮಗಾರಿ ನಿರ್ವಹಿಸಿ: ಜಿಪಂ ಸಿಇಒ ಮಂಜುನಾಥ ನಾಯಕ್ ಮಾತನಾಡಿ, ಬಿತ್ತನೆ ಬೀಜಗಳ ಗುಣಮಟ್ಟದಲ್ಲಿ 7 ಮಾದರಿಗಳು ಕಳಪೆಯಾಗಿದ್ದು, 4 ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಈ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.75 ಲಕ್ಷ ಮಾನವ ದಿನಗಳನ್ನು ಉತ್ಪಾದಿಸಲಾಗಿದೆ. ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಆದೇಶ ಜಾರಿಗೊಳಿಸಿ: ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ ಜಾಗೃತಿ ಸಮಿತಿ ಸಭೆ ನಡೆಸಲು ಕ್ರಮಕೈಗೊಳ್ಳಬೇಕು. ಕುಡಿಯುವ ನೀರು ಪೂರೈಕೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾರ್ಗ ಸೂಚಿಯಂತೆ ಕೈಗೊಳ್ಳಬೇಕು.
ಶೌಚಾಲಯ, ಅಂಗನವಾಡಿ, ಶಾಲಾ ಕೊಠಡಿ, ಕಾಂಪೌಂಡ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಪೂರ್ಣಗೊಂಡ ಕಾಮಗಾರಿಗಳನ್ನು ತ್ವರಿತವಾಗಿ ಹಸ್ತಾಂತರಿಸಬೇಕು. ಉಜ್ಜಿನಿ ಗ್ರಾಪಂ ಪಿಡಿಒ ಉಮಾಶಂಕರ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದ್ದು, ಆದೇಶ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಮಾತನಾಡಿ, ಕುಡತಿನಿ ಮತ್ತು ಮಿಂಚೇರಿ ಕೆರೆ ನಿರ್ಮಾಣ ಕಾಮಗಾರಿಯ ಕುಂಠಿತದಿಂದ ಆ ಭಾಗದ ಜನತೆಗೆ ತೊಂದರೆಯಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಮಮತಾ ಸುರೇಶ್ ಮಾತನಾಡಿದರು. ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಪಂ ಉಪ ಕಾರ್ಯದರ್ಶಿ ನಂದೀಶ್, ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.