ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸರ್ವರ ಹಿತ ಕಾಯಲಿ: ಕಾಶಿಶ್ರೀ

Lingaraj Badiger
Updated On : 13 Nov 2013, 10:46 am

ಕೊಟ್ಟೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ನಾಗರಿಕತೆ, ಕಡ್ಡಾಯ ಮತದಾನ ಮತ್ತು ಆರ್ಥಿಕ ನೀತಿ ಆಧಾರದ ಮೇಲೆ ಮೀಸಲಾತಿ ಇತ್ಯಾದಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದ ಸರ್ವ ಜನಾಂಗದ ಹಿತರಕ್ಷಣೆಗೆ ಮುಂದಾಗುವುದು ಅವಶ್ಯವಿದೆ ಎಂದು ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮುಂಬೈನ ಅಂಬರನಾಥ ಉಪ ನಗರದಲ್ಲಿ ಜರುಗಿದ ರಾಮುಶೇಟು ಹೆಬ್ಬಳ್ಳಿ ಇವರು ನಿರ್ಮಿಸಿದ ಮಂಜುನಾಥ ದೇವಾಲಯದ 21ನೇ ವರ್ಧಂತಿ ನಿಮಿತ್ತ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಗ್ರಂಥ ದಿಂಡಿ ಹಾಗೂ ಲೋಕಾರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರು ಮಾತನಾಡಿ, ಜಗತ್ತಿನ ಧರ್ಮಗಳು ಶ್ರದ್ಧೆ ಮತ್ತು ವಿಶ್ವಾಸಗಳ ಮೂಲಕ ಮಾನವೀಯ ಜೀವನ ಉನ್ನತಿಯನ್ನು ಸಾಧಿಸುತ್ತಾ ಬಂದಿವೆ ಎಂದರು.
ಸ್ವಾಗತಾರ್ಹ: ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಕೆಲ ಬುದ್ಧಿಜೀವಿಗಳು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮೂಢನಂಬಿಕೆ ನಿಷೇಧ ಕರಡು ಪತ್ರದಲ್ಲಿ ಅನೇಕ ಧರ್ಮಗಳ ಸದಾಚರಣೆಗಳನ್ನು ಮೂಢನಂಬಿಕೆ ಎಂದು ಪರಿಗಣಿಸಿರುವುದು ಖಂಡನೀಯ. ಕರಡುಪ್ರತಿಯ ಎಲ್ಲಾ ವಿಷಯಗಳನ್ನು ಅರ್ಥೈಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾಸ್ಪಾದ ಈ ವಿಚಾರವನ್ನು ಸದನದಲ್ಲಿ ಚರ್ಚಿಸುವುದನ್ನು ಕೈಬಿಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಭಾರ್ಷಿ ದಹಿವಡಕರ್ ಮಠದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ, ಧಾರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ರಾಮುಶೇಟು ಹೆಬ್ಬಳ್ಳಿ ಸ್ವಾಗತಿಸಿದರು, ಭೀಮಶಂಕರ ಜಂಗಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement