ಆರ್ಥಿಕ ವೈಫಲ್ಯ ದೃಢೀಕರಿಸಿದ ಸಿಎಂ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 13
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಕ್ಕರೆ ಲಾಬಿಗೆ ಮಣಿದಿದ್ದು, ರು. 300 ಕೋಟಿ ತೆರಿಗೆ ವಿನಾಯಿತಿಯನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡುವ ಮೂಲಕ ತಮ್ಮ ಆರು ತಿಂಗಳ ಆಡಳಿತಾವಧಿಯಲ್ಲಿ ಆರ್ಥಿಕ ವೈಫಲ್ಯ ದೃಢೀಕರಿಸಿದ್ದಾರೆ ಎಂದು ಕರ್ನಾಟಕ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆಯನ್ನು ಸರಿಯಾಗಿ ಪಾವತಿಸದೆ ಮೋಸ ಮಾಡುವವರಿಗೆ ತೆರಿಗೆ ವಿನಾಯಿತಿ ಕೊಡುವ ಕೆಲಸ ಸರ್ಕಾರ ಮಾಡಿದೆ. ಕಾರ್ಖಾನೆಗಳು ರಾಜ್ಯದ ರೈತರಿಗೆ, ಸರ್ಕಾರಕ್ಕೆ ತ್ಯಾಗ ಮಾಡಿದ್ದು ಎಲ್ಲಿ ಎಂದು ಪ್ರಶ್ನಿಸಿದ ಅವರು, ಯಾವ ತ್ಯಾಗವನ್ನು ಮೆಚ್ಚಿ ಇಷ್ಟು ತೆರಿಗೆ ರಿಯಾಯಿತಿ ಮಾಡಿದ್ದಾರೆ? ಹೀಗಾಗಿ ಇದು ಮೊದಲ ಆರ್ಥಿಕ ವೈಫಲ್ಯ ಎಂದರು.
ಖಜಾನೆಗೆ ಮೋಸ: ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ, ಕಾರ್ಖಾನೆಗಳಿಂದ ತೆರಿಗೆ, ಸೆಸ್ ಇನ್ನಿತರೆ ಆದಾಯದ ಹಲವು ಮೂಲಗಳಿಂದ ಸರ್ಕಾರ ಸಂಗ್ರಹಿಸುವ ಒಟ್ಟು ರು. 300 ಕೋಟಿ ಬಿಟ್ಟಿರುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ ಇದು ಕೂಡ ಸರ್ಕಾರ ನೇರವಾಗಿ ಖಜಾನೆಗೆ ಮಾಡುವ ಮೋಸದ ತಂತ್ರವೇ ಹೊರತು ರೈತರಿಗೆ ನೆರವಾಗುವ ಕಾರ್ಯಕ್ರಮವಲ್ಲ ಎಂದು ದೂರಿದರು.
ಹೇಳಿಕೆ ಖಂಡನೀಯ: ರಾಜ್ಯದಲ್ಲಿ 7-8 ಸಕ್ಕರೆ ಕಾರ್ಖಾನೆಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಕಾರ್ಖಾನೆಗಳು ಮಾಜಿ, ಹಾಲಿ ಶಾಸಕ, ಸಚಿವರಿಗೆ ಸೇರಿವೆ. ಹೀಗಾಗಿ ಯಾವುದೆ ಮಾನದಂಡಗಳಿಲ್ಲದೆ ಸಕ್ಕರೆ ಬೆಲೆ ನಿಗದಿಪಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈಚೆಗೆ ರೈತರೊಂದಿಗೆ ನಡೆದ ಸಭೆಯಲ್ಲಿ ಸರ್ಕಾರ ನಿಗದಿಪಡಿಸಿದ ಕಬ್ಬಿನ ಬೆಲೆಗೆ ರೈತರು ಒಪ್ಪಿಗೆ ಸೂಚಿಸಿಲ್ಲ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಹಮತ ಸೂಚಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಖಂಡನೀಯ. ಸಭೆಯಲ್ಲಿ ರೈತರ ಹೇಳಿಕೆಗಳನ್ನು ದಾಖಲಿಸಬೇಕು. ಹೀಗಾಗಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ರೈತರು ತಿರಸ್ಕರಿಸಿದ್ದಾರೆ. ಕಬ್ಬಿಗೆ ಪರಿಷ್ಕೃತ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಅಧಿವೇಶನಕ್ಕೆ ಮುತ್ತಿಗೆ: ಕಬ್ಬಿಗೆ ಬೆಲೆ ನಿಗದಿ, ಮೆಕ್ಕೆಜೋಳ, ಬತ್ತಕ್ಕೆ ಬೆಂಬಲ ಬೆಲೆ, ಬರ ಸಮಸ್ಯೆ, ನೀರಾವರಿ ಯೋಜನೆಗಳು ಇವೆಲ್ಲವನ್ನು ಒಳಗೊಂಡಂತೆ ಹಳ್ಳಿಗಳನ್ನು ಸರ್ಕಾರ ಮರೆತಿದೆ. ಗ್ರಾಮೀಣ ಪರ ಯಾವ ಯೋಜನೆಗಳಿಲ್ಲ. ಹಳ್ಳಿಗಳನ್ನು ನೆನಪು ಮಾಡಲು ನ. 25ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸುವರ್ಣ ಸೌಧಕ್ಕೆ ಲಕ್ಷಾಂತರ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ದೇಸಾಯಿ ಜಡೆಪ್ಪ ಸೇರಿದಂತೆ ಇತರರು ಇದ್ದರು.
--