ಸುದ್ದಿ ಸಂಕ್ಷೇಪ
ಇಂದು ಸಚಿವರ ಪ್ರವಾಸ
ಬಳ್ಳಾರಿ: ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ನ. 15ರಂದು ಬೆಳಗ್ಗೆ 11ಕ್ಕೆ ಜಿಲ್ಲೆಯ ಹೂವಿನಹಡಗಲಿಗೆ ಆಗಮಿಸಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಮಗಾರಿಗಳ ವೀಕ್ಷಣೆ ಮಾಡಲಿದ್ದಾರೆ. ನಂತರ ಸಂಜೆ 5ಕ್ಕೆ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅಹವಾಲು ಸ್ವೀಕಾರ
ಬಳ್ಳಾರಿ: ಧಾರವಾಡದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ನ. 15 ಬಳ್ಳಾರಿ ನಿರೀಕ್ಷಣಾ ಮಂದಿರ (ಪಿಡಬ್ಲ್ಯುಡಿ) ದಲ್ಲಿ ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರಿಂದ ಕುಂದು ಕೊರತೆ, ಅಹವಾಲು ಸ್ವೀಕರಿಸಲಾಗುವುದು. ಜಿಲ್ಲೆಯ ಆಸಕ್ತ ಮಾಜಿ ಸೈನಿಕರು ತಮ್ಮ ಮೂಲ ಸೇನಾ ದಾಖಲೆಗಳು ಹಾಗೂ ಇಲಾಖೆಯಿಂದ ನೀಡಿದ ಗುರುತಿನ ಚೀಟಿಯೊಂದಿಗೆ ಅಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರೊಳಗೆ ಆಗಮಿಸಿ ಅಹವಾಲು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
ಹೂವಿನಹಡಗಲಿ: ಇಲ್ಲಿನ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಹಾಗೂ ಮೌಂಟ್ ಕಾರ್ಮೆಲ್ ಶಾಲೆ ಆಶ್ರಯದಲ್ಲಿ ತಾಲೂಕಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.
ಚರ್ಚ್ ನಿರ್ದೇಶಕ ರಾಜೇಶ್ ಡಿಸೋಜಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಗುವಿನಲ್ಲಿಯೂ ಕಲಾವಿದನಿದ್ದಾನೆ. ಅದನ್ನು ಅನಾವರಣಗೊಳಿಸಲು ಇಂತಹ ಸ್ಪರ್ಧೆಗಳು ಪೂರಕ. ಚಿಕ್ಕ ವಯಸ್ಸಿನಲ್ಲೇ ಉತ್ತಮ ವಿದ್ಯಾಭ್ಯಾಸ ನೀಡಿದ್ದಲ್ಲಿ ಮುಂದೆ ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಬಹುದು. ಇಂತಹ ಅನೇಕ ಕಾರ್ಯಕ್ರಮಗಳಿಗೆ ಟ್ರಸ್ಟ್ ಆದ್ಯತೆ ನೀಡುತ್ತದೆ ಎಂದರು.
ಸಿಆರ್ಪಿ ಬಸವರಾಜ್ ಉಪಸ್ಥಿತರಿದ್ದರು. ದ್ವಾರಕೀಶ್ ರೆಡ್ಡಿ, ಗಂಗಾಧರ್ ಕೆ. ತೀರ್ಪುಗಾರರಾಗಿದ್ದರು. ಪ್ರಕಾಶ್ ಸ್ವಾಗತಿಸಿದರು. ರಮೇಶ್ ನಿರೂಪಿಸಿದರು. ತಾಲೂಕಿನ ವಿವಿಧ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ಬಿಇಒ ಕೊಟ್ರೇಶ್ ವಿತರಿಸಿದರು.