ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಹಿಂದ ಶೈಕ್ಷಣಿಕ ಪ್ರವಾಸ: ಅಭಿಪ್ರಾಯಗಳು

Lingaraj Badiger
Updated On : 16 Nov 2013, 11:36 am

ಶಾಲೆಗೆ ಬರುವ ಮಕ್ಕಳು ಹದಿವಯಸ್ಸಿನವರು, ಅವರಲ್ಲಿ ಬೌದ್ಧಿಕ, ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಗಟ್ಟಿಗೊಂಡಿರುತ್ತದೆ. ಇದಕ್ಕೆ ಸರ್ಕಾರದ ಪೂರಕ ಅಂಶಗಳಾದ ಸಮವಸ್ತ್ರ, ಬಿಸಿಯೂಟಗಳು ಸಾಕ್ಷಿಯಾಗಿವೆ. ಅಹಿಂದ ಮಕ್ಕಳಿಗೆ ಮಾತ್ರ ಪ್ರವಾಸ ಎಂಬ ಸರ್ಕಾರದ ನೀತಿ ಮಕ್ಕಳ ಭಾವನಾತ್ಮಕ ಐಕ್ಯತೆಯ ಬಿರುಕಿಗೆ ಕಾರಣವಾಗುತ್ತದೆ.
-ಕಾಳಪ್ಪ ಪತ್ತಾರ್, ಮುಖ್ಯಶಿಕ್ಷಕ, ಎಂಬಿಎಸ್‌ಎಲ್ ಶಾಲೆ, ಬಳ್ಳಾರಿ
ಶೈಕ್ಷಣಿಕ ಪ್ರವಾಸ ಮಕ್ಕಳಿಗೆ ವೈಜ್ಞಾನಿಕ, ಐತಿಹಾಸಿಕವಾಗಿ ಕೊಡುವ ಹೊರಗಿನ ಶಿಕ್ಷಣ. ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡರೆ ಮಾತ್ರ ಹೊರಗಿನ ಶಿಕ್ಷಣ ಪರಿಣಾಮಕಾರಿಯಾಗಿ ನೀಡಲು ಸಾಧ್ಯ. ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ಎಂಬ ನಿಲುವು ವಿದ್ಯಾರ್ಥಿಗಳ ಭಿನ್ನತೆಯನ್ನು ಸೃಷ್ಟಿ ಮಾಡುತ್ತದೆ.
-ಎಂ.ಬಿ. ದೇವೇಂದ್ರಪ್ಪ, ಮುಖ್ಯೋಪಾಧ್ಯಾಯ, ಬಸನಗೌಡ ಪ್ರೌಢಶಾಲೆ, ಕುಡಿತಿನಿ
ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಮಾತ್ರ ಶಾಲಾ ಪ್ರವಾಸವನ್ನು ಸರ್ಕಾರ ಏರ್ಪಡಿಸುವುದು ಸರಿಯಾದ ಕ್ರಮ ಅಲ್ಲ. ಇದು ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರುವ ಸೂಕ್ಷ್ಮ ವಿಷಯ. ಪ್ರವಾಸದಲ್ಲಿ ತಾರತಮ್ಯಕ್ಕೆ ಆಸ್ಪದ ನೀಡದೇ ಸರ್ವ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಯೋಜನೆ ರೂಪುಗೊಳ್ಳಬೇಕು.
-ಹಳ್ಳಿ ಸೋಮಣ್ಣ, ನಿವೃತ್ತ ಶಿಕ್ಷಕ, ಕೊಟ್ಟೂರು
ಮಕ್ಕಳಲ್ಲಿ ಜಾತಿ ವಿಷಬೀಜ ಬಿತ್ತುವ ಯಾವುದೇ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಾರದು. ಅಹಿಂದ ವರ್ಗದ ಮಕ್ಕಳಿಗೆ ಮಾತ್ರ ಶಾಲಾ ಪ್ರವಾಸ ಕೈಗೊಳ್ಳುವುದು ಸರಿಯಲ್ಲ. ಎಲ್ಲ ವರ್ಗದ ಮಕ್ಕಳಿಗೆ ಪ್ರವಾಸದ ಲಾಭ ಸಿಗಬೇಕು. ಅಂದಾಗ ಗುಣಾತ್ಮಕ ಶಿಕ್ಷಣ ಪ್ರತಿಯೊಬ್ಬರಿಗೆ ನೀಡಲು ಸಾಧ್ಯ.
-ಜೆ. ಬಸವರಾಜ್, ನಿವೃತ್ತ ಶಿಕ್ಷಕ, ಕೊಟ್ಟೂರು
ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಶಿಕ್ಷಕರು ಜಾತಿ ಆಧಾರದ ಮೇಲೆ ಶಿಕ್ಷಣ ನೀಡುತ್ತಿಲ್ಲ. ಜಾತ್ಯತೀತವಾಗಿ ಶಿಕ್ಷಕರು ಪಾಠ ಮಾಡುತ್ತಾರೆ. ಈ ಸರ್ಕಾರ ಜಾತಿ ವಿಷಬೀಜ ಹುಟ್ಟು ಹಾಕಿದಂತಾಗಿದೆ. ಸರ್ಕಾರದ ಯೋಜನೆಗಳಿಂದ ಸಮಾಜ ಒಡೆಯುವ ಹುನ್ನಾರ ಆಗಬಾರದು. ಇದೊಂದು ಕೀಳು ಮಟ್ಟದ ಯೋಜನೆ.
-ಸುರೇಶ ಅಂಗಡಿ, ಶಿಕ್ಷಕರು, ತುಂಗಭದ್ರಾ ಪ್ರೌಢಶಾಲೆ, ಹೂವಿನಹಡಗಲಿ
ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಶೈಕ್ಷಣಿಕ ಪ್ರವಾಸ ಸಹಕಾರಿ. ಜಾತಿ ಮತ್ತು ಕೋಮುವಾದ ಆಧಾರದ ಮೇಲೆ ಸರ್ಕಾರದ ಯೋಜನೆಗಳು ರಚನೆಯಾಗಬಾರದು. ಸಂವಿಧಾನಾತ್ಮಕವಾಗಿ ಎಲ್ಲ ಮಕ್ಕಳಿಗೂ ಪ್ರವಾಸ ಯೋಜನೆ ಅನ್ವಯವಾಗುವಂತಿರಬೇಕು.
-ದ್ವಾರಕೇಶ ರೆಡ್ಡಿ, ತುಂಗಭದ್ರಾ ಪ್ರೌಢಶಾಲೆ, ಹೂವಿನಹಡಗಲಿ
ಶಾಲಾ, ಕಾಲೇಜುಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸಮಾನರು. ಸರ್ಕಾರ ಸೌಲಭ್ಯಗಳನ್ನು ನೀಡುವುದಾದರೆ ಆರ್ಥಿಕವಾಗಿ ಹಿಂದುಳಿದರುವ ಎಲ್ಲ ವಿದ್ಯಾರ್ಥಿಗಳಿಗೂ ತಲುಪಿಸಬೇಕು. ಅಹಿಂದ ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯಗಳನ್ನು ಕಲ್ಪಿಸುವುದು ಸರಿಯಲ್ಲ.
-ಪಿ. ಖಾಸಿಂಸಾಬ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಮರಿಯಮ್ಮನಹಳ್ಳಿ
ನಾವೆಲ್ಲಾ ನಿತ್ಯ ಕೂಡಿಕೊಂಡು ಪ್ರಾರ್ಥನೆ ಮಾಡುತ್ತೇವೆ, ಎಲ್ಲರೂ ಒಟ್ಟಿಗೆ ಓದುತ್ತೇವೆ, ಆಟವಾಡುತ್ತೇವೆ. ಹೀಗಿರುವಾಗ ನಮಗೊಂದೇ ಶೈಕ್ಷಣಿಕ ಪ್ರವಾಸ ಕರೆದುಕೊಂಡು ಹೋದರೆ, ಇತರ ಸ್ನೇಹಿತರಿಗೆ ಬೇಸರವಾಗುತ್ತದೆ. ಎಲ್ಲರನ್ನೂ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು.
-ಪ್ರೇಮ್‌ಕುಮಾರ್,  8ನೇ ತರಗತಿ ವಿದ್ಯಾರ್ಥಿ, ಎಂಬಿಎಸ್‌ಎಲ್, ಬಳ್ಳಾರಿ
ನಾವೆಲ್ಲರೂ ಸ್ನೇಹಿತರು, ಒಬ್ಬರನ್ನು ಕರೆದುಕೊಂಡು ಹೋಗಿ ಇನ್ನೊಬ್ಬರನ್ನು ಬಿಟ್ಟರೆ ಮಕ್ಕಳಿಗೆ ದುಃಖವಾಗುವುದಿಲ್ಲವೇ? ಶಾಲೆ ಕೋಣೆಯಲ್ಲಿ, ಬಿಸಿಯೂಟದ ಕೋಣೆಯಲ್ಲಿ, ಮೈದಾನದಲ್ಲಿ ಒಟ್ಟಾಗಿ ಓದಿ, ಊಟ ಮಾಡಿ, ಆಟವಾಡಿ ಬೆಳೆಯುತ್ತೇವೆ. ಕೆಲವರಿಗೆ ಮಾತ್ರ ಶೈಕ್ಷಣಿಕ ಪ್ರವಾಸವೆಂದರೆ ಸರ್ಕಾರವೇ ಜಾತಿಭೇದ ಮಾಡಿದಂತಲ್ಲವೇ?
-ಮನೋಹರ್ ಆಚಾರ್, 9ನೇ ತರಗತಿ, ಬಾಲಭಾರತಿ ಶಾಲೆ, ಬಳ್ಳಾರಿ
ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿಕೊಡುವ ಉದ್ದೇಶವಿರಿಸಿಕೊಂಡ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಕೆಲ ಜಾತಿಯವರಿಗೆ ಮಾತ್ರ ಸೀಮಿತಗೊಳಿಸಲು ಹೊರಟಿರುವುದು ನೋವಿನ ಸಂಗತಿ. ಸರ್ವಜನಾಂಗದ ಶಾಲಾ ಮಕ್ಕಳಿಗೆ ಪ್ರವಾಸ ಏರ್ಪಡಿಸಬೇಕು.
-ಎಚ್.ವಿ. ತೇಜಶ್ವಿನಿ, 8ನೇ ತರಗತಿ, ಮಹಾದೇವ ಪ್ರೌಢಶಾಲೆ, ಕೊಟ್ಟೂರು
ಶಾಲಾ ಮಕ್ಕಳಾದ ನಮ್ಮಲ್ಲಿ ಯಾವುದೇ ಭಿನ್ನಗಳಿಲ್ಲ. ನಾವೆಲ್ಲರೂ ಸಹೋದರ, ಸಹೋದರಿಯರಂತೆ ವಿದ್ಯೆ ಕಲಿಯುತ್ತೇವೆ. ಮಕ್ಕಳ ಪ್ರವಾಸವನ್ನು ಸರ್ಕಾರ ಕೈಗೊಳ್ಳುವ ನಿಟ್ಟಿನಲ್ಲಿ ಸಮಾನತೆ ಕಾಪಾಡಿಕೊಳ್ಳಬೇಕೆ ಹೊರತು ವರ್ಗಗಳನ್ನು ಎಣಿಸಬಾರದು.
-ಎಸ್.ಕೆ. ಸಂಜಯ್, 9ನೇ ತರಗತಿ, ಕೊಟ್ಟೂರು
ಶಾಲಾ ಪ್ರವಾಸವನ್ನು ಹಮ್ಮಿಕೊಳ್ಳುವುದೇ ಮಕ್ಕಳಲ್ಲಿ ಸಮಾನತೆ ಮತ್ತು ಸ್ನೇಹ, ಸೌಹಾರ್ದ ಬೆಳೆಸುವುದಕ್ಕೆ. ನೀತಿ, ನಿಯಮಗಳಲ್ಲಿ ಜಾತಿ ತಾರತಮ್ಯ ಮಾಡಲು ಹೊರಟಿರುವುದು ಕೆಲ ಮಕ್ಕಳಿಗೆ ಒಳಿತಾಗುವುದಾದರೂ ಬಹುತೇಕ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಸಾಮರಸ್ಯಕ್ಕೆ ತೊಂದರೆ ಉಂಟು ಮಾಡುವ ಸಾಧ್ಯತೆ ಹೆಚ್ಚು. ಅಹಿಂದ ವರ್ಗದ ಹೆಸರಿನಲ್ಲಿ ಭೇದ ಎಣಿಸುವುದು ಸರಿಯಲ್ಲ.
-ಕೆ.ಎಂ. ನಿವೇದಿತಾ, 9ನೇ ತರಗತಿ, ಮಹಾದೇವ ಪ್ರೌಢಶಾಲೆ, ಕೊಟ್ಟೂರು
ವಿದ್ಯಾರ್ಥಿಗಳೆಲ್ಲರೂ ಶಾಲೆಯಲ್ಲಿ ಒಂದೇ ಎನ್ನುವ ಮನೋಭಾವನೆಯಿಂದ ಇರುತ್ತೇವೆ. ಆದರೆ ಸರ್ಕಾರ ಸೌಲಭ್ಯಗಳನ್ನು ನೀಡುವಾಗ ಎಲ್ಲ ವಿದ್ಯಾರ್ಥಿಗಳಿಗೂ ಸಮಾನವಾಗಿ ನೀಡಬೇಕು. ಇಲ್ಲವೆ ಎಲ್ಲಾ ಜಾತಿಗಳಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು. ವಿದ್ಯಾರ್ಥಿಗಳಲ್ಲಿ ಭೇದ, ಭಾವ ಮೂಡಿಸುವುದು ಸರಿಯಲ್ಲ. ಎಲ್ಲಾ ಜಾತಿಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುವಂತಾಗಬೇಕು.
-ಬಿ. ವಿನಯ್, ಸ್ಮಯೋರ್ ಶಾಲೆ ವಿದ್ಯಾರ್ಥಿ, ವ್ಯಾಸನಕೆರೆ, ಹೊಸಪೇಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement