ಇಂದು ಪುಸ್ತಕ ಪ್ರದರ್ಶನ
ಕೊಟ್ಟೂರು: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2013ರ ಕಾರ್ಯಕ್ರಮದ ನಿಮಿತ್ತ ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ನ. 16ರಂದು ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಪೋಸ್ಟ್ ಮಾಸ್ಟರ್ ದೇವರಮನಿ ಕರಿಯಪ್ಪ ಪ್ರದರ್ಶನ ಉದ್ಘಾಟಿಸುವರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಸೆರೆಗಾರ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ರಾಮಯ್ಯ, ಸಾಹಿತಿ ಎನ್.ಎಂ. ಕೊಟ್ರೇಶ್, ಎ.ಎಚ್.ಎಂ. ಷಡಕ್ಷರಯ್ಯ, ಬಿ. ಶಂಕ್ರಪ್ಪ, ಉಪನ್ಯಾಸಕ ಬಿ. ಗೋವಿಂದಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಶಾಖಾ ಗ್ರಂಥಾಲಯಾಧಿಕಾರಿ ಮಲ್ಲಪ್ಪ ಗೂಡ್ಲನೂರು ತಿಳಿಸಿದ್ದಾರೆ.
ಇಂದು ಪೈಕಾ ಕ್ರೀಡಾಕೂಟ
ಹೊಸಪೇಟೆ: ಬಳ್ಳಾರಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ತಾಲೂಕು ಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟ ತಾಲೂಕಿನ ಮರಿಯಮ್ಮನಹಳ್ಳಿಯ ವಿನಾಯಕ ಪ್ರೌಢಶಾಲಾ ಆವರಣದಲ್ಲಿ ನ. 16ರಂದು ನಡೆಯಲಿದೆ. ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಕ್ರೀಡಾಕೂಟ ಉದ್ಘಾಟಿಸಲಿದ್ದು, ಸ್ಥಳೀಯ ಗ್ರಾಪಂ ಅಧ್ಯಕ್ಷ ಸುಭಾನ್ ಅಧ್ಯಕ್ಷತೆ ವಹಿಸುವರು. ಮರಿಯಮ್ಮನಹಳ್ಳಿ ಜಿಪಂ ಸದಸ್ಯೆ ತಿಪ್ಪೀಬಾಯಿ ಠಾಕ್ರಾನಾಯ್ಕ ಕ್ರೀಡಾಜ್ಯೋತಿ ಬೆಳಗಿಸುವರು. ಸಂಸದೆ ಜೆ. ಶಾಂತಾ, ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ತಾಪಂ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ, ತಾಪಂ ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಜಿಪಂ ಸದಸ್ಯೆ ಅನಿತಾ ಆನಂದ, ಅನ್ನದಾನ ರೆಡ್ಡಿ, ಬಾಣದ ಸೀತಮ್ಮ, ಯು. ಸೋಮಪ್ಪ, ಎಚ್. ಲಕ್ಷ್ಮಣ, ಆನಂದಮ್ಮ ಮಾರ್ಗದಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ ತಿಳಿಸಿದ್ದಾರೆ.
ಟಿಪ್ಪರ್ ಡಿಕ್ಕಿ: ರೇಲ್ವೆ ಉದ್ಯೋಗಿ ಸಾವು
ಬಳ್ಳಾರಿ: ಜೆಎಸ್ಡಬ್ಲ್ಯೂನ ಒಳಗಡೆ ಇರುವ ಸ್ಲಾಗ್ ಡಂಪಿಂಗ್ ಯಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಲ್ವೆ ಇಲಾಖೆಯ ಏರಿಯಾ ಕಂಟ್ರೋಲರ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಜರುಗಿದೆ. ಮೃತನನ್ನು ತೋರಣಗಲ್ ಸ್ಟೇಷನ್ ನಿವಾಸಿ ಗಾದಿಲಿಂಗಪ್ಪ (51) ಎಂದು ಗುರುತಿಸಲಾಗಿದೆ. ಈತನು ಜೆಎಸ್ಎಸ್ಡಬ್ಲ್ಯೂನಲ್ಲಿನ ಸ್ಲಾಗ್ ಡಂಪಿಂಗ್ ಯಾರ್ಡ್ನಲ್ಲಿ ರೇಲ್ವೆ ಇಲಾಖೆಯ ಏರಿಯಾ ಕಂಟ್ರೋಲರ್ ಕಾರ್ಯನಿರ್ವಹಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಗಾದಿಲಿಂಗಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.