ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

Lingaraj Badiger
Updated On : 16 Nov 2013, 11:51 am

ಸಿರುಗುಪ್ಪ: ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಆಚರಿಸುವ ಮೊಹರಂನ ಪೀರಲ ದೇವರ ಹಬ್ಬಗಳಲ್ಲಿ ಮುದಗಲ್ಲು ಕಾಣಿಕೆ, ಅಯನೂರು ಸಕ್ಕರೆ, ಅಗಸನೂರು ಕಾಯಿಯನ್ನು ನೀಡಿ ಹರಕೆ ಸಲ್ಲಿಸುವುದು ವಿಶೇಷ. ಹೀಗಾಗಿ ಈ ಬಾರಿಯ ಹಬ್ಬದಲ್ಲಿ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದಲ್ಲಿ ಪೀರಲ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಈ ಹಬ್ಬದ ಸಂದರ್ಭದಲ್ಲಿ ಮದ್ಯ, ಮಾಂಸ ಸಂಪೂರ್ಣ ನಿಷೇಧ, ಸತಿ ಪತಿಗಳು ಕೂಡುವಂತಿಲ್ಲ, ಸ್ತ್ರೀಯರು ತಲೆಯಲ್ಲಿ ಹೂ ಮುಡಿಯುವಂತಿಲ್ಲ, ಯಾರೊಬ್ಬರೂ ಕಾಲಿಗೆ ಪಾದರಕ್ಷೆ ಹಾಕುವಂತಿಲ್ಲ, ಹಬ್ಬ ಪ್ರಾರಂಭವಾಗಿ ಮುಗಿಯುವವರೆಗೆ ಮನೆಯ ಬಾಗಿಲು ಮುಚ್ಚುವಂತಿಲ್ಲ. ಈ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ. ಅಗಸನೂರು ಗ್ರಾಮದಲ್ಲಿ 7 ದಿನದ ಹಬ್ಬದ ಕಾರ್ಯಕ್ರಮ ಆಚರಿಸುತ್ತಾರೆ. ಹರಕೆ ಹೊತ್ತ ಭಕ್ತರು ಕಾಯಿ, ಸಕ್ಕರೆ ನೀಡುವುದು ವಿಶೇಷ.
ನಾದಕ್ಕೆ ಹೆಜ್ಜೆ ಹಾಕಿದರು: ದೇವರನ್ನು ಎತ್ತುವ ಮುನ್ನ ಬಂಡಾರ ಎರಚುವುದು, ಕುಂಬ ಹಿಡಿದು ಮೇಲು ಪದ ಹಾಡುತ್ತ ತಮಟೆ ನಾದಕ್ಕೆ ಹೆಜ್ಜೆ ಹಾಕುವ ಜನಪದರು, ನೂರಾರು ಹಾಡುಗಳು ಇಲ್ಲಿ ತನ್ನಷ್ಟಕ್ಕೇ ತಾನೆ ಅನಾವರಣಗೊಳ್ಳುತ್ತವೆ. ಸಂಜೆಯಾಗುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ನೂರಾರು ಭಕ್ತರು 50ಕ್ಕೂ ಹೆಚ್ಚು ತಮಟೆಗಳ ಒಂದೇ ನಾದಕ್ಕೆ ಹೆಜ್ಜೆ ಹಾಕುತ್ತ ಕುಣಿದು ಕುಪ್ಪಳಿಸುತ್ತಾರೆ.
ಗ್ರಾಮದ ಹಿರಿಯ ಮನೆತನದ ಮಾಜಿ ತಾಪಂ ಅಧ್ಯಕ್ಷ ಎಂ. ಗೋಪಾಲರೆಡ್ಡಿ ನಿವಾಸಕ್ಕೆ ತೆರಳಿ ದೇವರಿಗೆ ಮೊದಲ ಪೂಜೆ ಸಲ್ಲಿಸಿ ನಂತರ ಗ್ರಾಮದ ಇತರೆ ಮನೆಗಳಿಗೆ ತೆರಳುತ್ತದೆ. ಮೊದಲ ದಿನ ನಡೆಯುವ ಈ ಹಬ್ಬದ ಆಚರಣೆಯನ್ನು ನೋಡಲು ರಾಯಚೂರು, ಕೊಪ್ಪಳ, ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ, ನೆರೆಯ ಆಂಧ್ರಪ್ರದೇಶದಿಂದಲೂ ಜನರು ಬರುತ್ತಾರೆ. ಹಬ್ಬವು ಇಷ್ಟೊಂದು ಅದ್ಧೂರಿಯಾಗಿ ಜರುಗಿದರೂ ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ನಡೆಯುತ್ತದೆ.
ಶಾಂತಿಯುತ ಹಬ್ಬದಾಚರಣೆ
ಹೊಸಪೇಟೆ: ಹಿಂದೂ- ಮುಸ್ಲಿಂರ ಭಾವೈಕ್ಯತೆ ಸಂಖೇತವಾದ ಮೊಹರಂ ಹಬ್ಬವನ್ನು ತಾಲೂಕಿನ ಜನತೆ ಶ್ರದ್ಧಾ, ಭಕ್ತಿ ಮತ್ತು ಶಾಂತಿಯುತವಾಗಿ ಶುಕ್ರವಾರ ಆಚರಿಸಿದರು.
ಸರ್ವ ಧರ್ಮೀಯರು ಆಚರಿಸುವ ಮೊಹರಂ ಹಬ್ಬವನ್ನು ಕತ್ತಲ ರಾತ್ರಿಯ ದಿನ ಸಾವಿರಾರು ಸಂಖ್ಯೆಯಲ್ಲಿ ಪೀರಲ ದೇವರ ಮಸೀದಿಗೆ ತೆರಳಿ ಲಾಡಿಗಳನ್ನು ಧರಿಸಿ ಫಕೀರರಾಗಿ ದೇವರಿಗೆ ಸಕ್ಕರೆ ಅರ್ಪಿಸಿದರು.
ಅಲೆ ಕುಣಿಯಲ್ಲಿ ಹಾಕಿರುವ ಬೆಂಕಿಗೆ ಉಪ್ಪು ಹಾಕಿದರು. ಹುಲಿ, ಅಚ್ಚಳ್ಳಿ, ಬಿಚ್ಚಳ್ಳಿ, ಕರಡಿ ವೇಷ ಧರಿಸಿ ಹರಕೆ ತೀರಿಸಿದರು.
ಕೆಲ ಗ್ರಾಮಗಳಲ್ಲಿ ಅಲೆ ಕುಣಿ ಸುತ್ತಲೂ ಇಡೀ ರಾತ್ರಿ ಯುವಕರು ಹಲಗೆ ವಾದನಕ್ಕೆ ತಕ್ಕಂತೆ ಹೆಜ್ಜೆ ಕುಣಿತ ಹಾಕುತ್ತಾ ಸಂಭ್ರಮಿಸಿದರು. ಬೆಳಗಿನ ಚಾವ ಪೀರಲ ದೇವರು ಅಗ್ನಿಪ್ರವೇಶ ಮಾಡಿ ಹೇಳಿಕೆಗಳನ್ನು ನೀಡುತ್ತದೆ. ನಂತರ ಭಕ್ತರ ಮನೆಗಳಿಗೆ ತೆರಳುತ್ತದೆ.
ಗ್ರಾಮಗಳಲ್ಲೂ ಆಚರಣೆ: ಮೊಹರಂ ಕೊನೆ ದಿನವಾದ ಶುಕ್ರವಾರ ಸಂಜೆ ಎಲ್ಲ ಮಸೀದಿಗಳಲ್ಲಿ ಪೀರಲ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು. ತಾಲೂಕಿನ ಮರಿಯಮ್ಮನಹಳ್ಳಿ, ಗುಂಡಾ, ಡಣಾಪುರ, ಹನುಮನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಪೀರಲ ದೇವರಿಗೆ ಅಡ್ಡಲಾಗಿ ಮಲಗಿ, ದೇವರು ಮಲಗಿದವರ ಮೇಲೆ ಹಾದು ಹೋಗುತ್ತಿರುವ ದೃಶ್ಯ ಗ್ರಾಮೀಣ ಪ್ರದೇಶದಲ್ಲಿ ಕಂಡು ಬಂದಿತು.
ಹೊಸಪೇಟೆ, ಕಮಲಾಪುರ, ಗಾದಿಗನೂರು, ಪಾಪಿನಾಯಕನಹಳ್ಳಿ, ಬಯಲು ವದ್ದಿಗೇರಿ, ಮರಿಯಮ್ಮನಹಳ್ಳಿ ಹೋಬಳಿಯ ಅನೇಕ ಗ್ರಾಮಗಳಲ್ಲಿ ಮೊಹರಂನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾರ್ವಜನಿಕರಿಗೆ ಬೆಲ್ಲದ ಪಾನಕ ವಿತರಿಸಿದರು.
ಪೀರಲ ದೇವರ ಮೆರವಣಿಗೆ
ಕೊಟ್ಟೂರು: ಇಸ್ಲಾಂ ಧರ್ಮದ ಪ್ರವಾದಿಗಳಾಗಿದ್ದ ಹಸನ್ ಮತ್ತು ಹುಸೇನ್ ಅವರ ಹತ್ಯೆಯ ಪ್ರತೀಕವಾಗಿ ಆಚರಿಸಲಾಗುವ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಸರ್ವಧರ್ಮೀಯರು ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಆಚರಿಸಿದರು.
ಮೊಹರಂ ಕೊನೆಯ ದಿನವಾದ ಶುಕ್ರವಾರ ಹಬ್ಬದ ನಿಮಿತ್ತ ಪಟ್ಟಣದ ಐದು ಮಸೀದಿಗಳಲ್ಲಿ ಪೀರಲ ದೇವರನ್ನು ಇರಿಸಿ ಪೂಜಿಸಲಾಯಿತು. ಈ ದೇವರ ಮೂರ್ತಿಗಳನ್ನು ನೀರಿಗೆ ಕಳುಹಿಸುವ ಸಂಬಂಧ ಮೆರವಣಿಗೆ ನಡೆಯಿತು. ಭಕ್ತರು ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಂಡು ಮೆರವಣಿಗೆಯುದ್ದಕ್ಕೂ ಸಾಗಿದರು.
ದೇವರ ಮೆರವಣಿಗೆ ಹಾದು ಹೋಗುವ ದಾರಿಯುದ್ದಕ್ಕೂ ಭಕ್ತರು ಮಲಗಿಗೊಂಡು ದೇವರಿಗೆ ನಮಿಸಿದರು. ಹಬ್ಬದ ನಿಮಿತ್ತ ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಬಗೆಯ ಅಹಿತಕರ ಘಟನೆಗಳು ನಡೆಯದೆ ಮೊಹರಂ ಹಬ್ಬವನ್ನು ಪಟ್ಟಣದ ಜನತೆ ಸಂಪೂರ್ಣ ಶಾಂತಿಯುತವಾಗಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ಮುಕ್ತಾಯಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement