ಬಲದಂಡೆ: ಮತ್ತೆ ತಾರತಮ್ಯ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 16
ಸಿಂಗಟಾಲೂರು ಏತನೀರಾವರಿ ಯೋಜನೆಯ ಆರಂಭದಿಂದಲೂ ಬಲದಂಡೆ ಭಾಗದ ಬಳ್ಳಾರಿ ಜಿಲ್ಲೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಯೋಜನೆ ಆರಂಭವಾಗಿದ್ದೇ ಬಲದಂಡೆ ಭಾಗದಿಂದ, ಆದರೆ ಇಡೀ ಯೋಜನೆಯ ಲಾಭ ಪಡೆದುಕೊಂಡಿದ್ದು ಮಾತ್ರ ಎಡದಂಡೆ ಭಾಗದ ಗದಗ, ಕೊಪ್ಪಳ ಜಿಲ್ಲೆಗಳು.
ಬಳ್ಳಾರಿ ಜಿಲ್ಲೆ ಭಾಗದ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಹಾಗೂ ರೈತರ ಹೋರಾಟಗಳು ಇಲ್ಲದ ಕಾರಣ ಪದೇ ಪದೇ ನಿರ್ಲಕ್ಷ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕೃಷ್ಣಾ ಕೊಳ್ಳ ವ್ಯಾಪ್ತಿಗೆ ಒಳಪಡುವ ಯೋಜನೆಯು 1992ರಲ್ಲಿ 7.64 ಟಿಎಂಸಿ ನೀರನ್ನು ಬಳಕೆ ಮಾಡಿಕೊಂಡು ಎರಡು ಭಾಗಕ್ಕೂ 40 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆಗೆ ರು. 63.62 ಕೋಟಿ ಮಂಜೂರಾಗಿತ್ತು.
ರು. 1864.50 ಕೋಟಿಗೆ: ಬಳ್ಳಾರಿ, ಗದಗ, ಕೊಪ್ಪಳ ಜಿಲ್ಲೆಗಳು ಬರಪೀಡಿತ ಪ್ರದೇಶಗಳಾಗಿದ್ದು, ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಮಾಡಬೇಕೆಂಬ ಉದ್ದೇಶದಿಂದ 7.64 ಟಿಎಂಸಿ ಇದ್ದ ನೀರಿನ ಬಳಕೆ ಪ್ರಮಾಣವನ್ನು 10.91 ಟಿಎಂಸಿಗೆ ಹೆಚ್ಚಿಸಿ ಒಟ್ಟು 18.55 ಟಿಎಂಸಿ ನೀರಿನ ಬಳಕೆಗೆ ಅನುಮತಿ ಪಡೆದು, ರು. 595 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ 1,70,236 ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನಾ ಕಾಮಗಾರಿ ಆಮೆಗತಿಯಲ್ಲಿ ಆರಂಭವಾಗಿದ್ದರಿಂದ 2011ರಲ್ಲಿ ಯೋಜನಾ ವೆಚ್ಚ ಬರೋಬ್ಬರಿ ರು. 1864.50 ಕೋಟಿಗೆ ಬಂದು ನಿಂತಿದೆ.
ಹೆಚ್ಚುವರಿ ಮಾಡಿದರು: ಅಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ಗದಗ ಭಾಗಕ್ಕೆ ಹೆಚ್ಚುವರಿ ನೀರಾವರಿ ಸೌಲಭ್ಯ ನೀಡಬೇಕೆಂಬ ಉದ್ದೇಶದಿಂದ ಬಲದಂಡೆ ಭಾಗಕ್ಕೆ ಕೇವಲ 36 ಸಾವಿರ ಎಕರೆ ನೀರು, ಆದರೆ ಎಡದಂಡೆ ಭಾಗಕ್ಕೆ 1.20 ಲಕ್ಷ ಎಕರೆಗೂ ಹೆಚ್ಚು ನೀರಾವರಿ ಅಚ್ಚುಕಟ್ಟು ಪ್ರದೇಶವನ್ನು ಹೊಂದುವಂತೆ ಮಾಡಿದ್ದರು. ಯೋಜನೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶರು ಅನೇಕ ಬಾರಿ ಹೋರಾಟ ಮಾಡಿ ಅನುದಾನ ತಂದಿದ್ದಾರೆ. ಹಿಂದಿನ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ತಂದು ಅಂದಿನ ಶಾಸಕ ಬಿ. ಚಂದ್ರನಾಯ್ಕ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸಿ ಸೆ. 4ರಂದು ಲೋಕಾರ್ಪಣೆ ಮಾಡಿದ್ದರು.
ಮತ್ತೆ ಅದೇ ಭಾಗಕ್ಕೆ: ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ಷ್ಮ ಹನಿ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದು, ಕೇವಲ ಗದಗ, ಕೊಪ್ಪಳ ಭಾಗಕ್ಕೆ ಮಾತ್ರ ಯೋಜನೆ ಅನ್ವಯವಾಗುವಂತೆ ಆದೇಶ ಹೊರಡಿಸಿರುವುದು ಬಲದಂಡೆ ಭಾಗದ ರೈತರನ್ನು ಕೆರಳಿಸುವಂತೆ ಮಾಡಿದೆ.
ಎಡದಂಡೆ ಭಾಗದಲ್ಲಿ 1.20 ಲಕ್ಷ ಎಕರೆಗೆ ಹೆಚ್ಚು ನೀರಾವರಿ ಸೌಲಭ್ಯ ಇದ್ದರೂ ಮತ್ತೆ ಅದೇ ಭಾಗ (ಗದಗ, ಮುಂಡರಗಿ, ಕೊಪ್ಪಳ, ಯಲಬುರ್ಗಾ ತಾಲೂಕು)ಕ್ಕೆ ಹೆಚ್ಚುವರಿಯಾಗಿ 94,993 ಎಕರೆ ಹನಿ ನೀರಾವರಿ ಮಾಡಲು ರು. 5,768 ಕೋಟಿ ಅನುಮೋದನೆಯನ್ನು ಕರ್ನಾಟಕ ನೀರಾವರಿ ನಿಗಮ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ಆದಷ್ಟು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಬಲದಂಡೆ ಭಾಗಕ್ಕೆ ಆದ್ಯತೆ ನೀಡಲಿ: ಬಲದಂಡೆ ಭಾಗದಲ್ಲಿ ಈಗಾಗಲೆ ರು. 180 ಕೋಟಿ ಕಾಲುವೆ ಕಾಮಗಾರಿ ಮುಗಿದಿದೆ. ಇದರಿಂದ 36 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ. ಆದ್ದರಿಂದ ಹನಿ ನೀರಾವರಿ ಯೋಜನೆ ಮಾಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದರು. ಆದರೆ ಆಂಧ್ರದ ನೀರಾವರಿ ತಜ್ಞ ಯಲ್ಲಾರೆಡ್ಡಿ ಅವರು ಭೇಟಿ ನೀಡಿ ಹನಿ ನೀರಾವರಿ ಕುರಿತು ಮಾಹಿತಿ ಪಡೆದು, ಸ್ಥಳ ಪರಿಶೀಲನೆಗೆ ಮುಖ್ಯ ಎಂಜಿನಿಯರ್ ಆದಷ್ಟು ಬೇಗ ಕರೆ ತಂದು ಬಲದಂಡೆ ಭಾಗದ 20 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ ಒತ್ತಾಯಿಸಿದ್ದಾರೆ.
ಡಾ. ನಂಜುಂಡಪ್ಪ ವರದಿ ಪ್ರಕಾರ ಹೂವಿನಹಡಗಲಿ ತಾಲೂಕು ತೀರಾ ಹಿಂದುಳಿದ ಪ್ರದೇಶ, ಪಕ್ಕದಲ್ಲೇ ತುಂಗಭದ್ರಾ ನದಿ ಹರಿದರೂ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬಲದಂಡೆ ಭಾಗದಲ್ಲಿ ಇಂದಿನ ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಮಾಡಬೇಕೆಂದು ಆಗ್ರಹಿಸಿದರು.
ಈ ಕುರಿತು ಯೋಜನೆಯ ಕಾರ್ಯಪಾಲಕ ಅಭಿಯಂತ ಓದೋ ಗಂಗಪ್ಪರನ್ನು ಮಾತನಾಡಿಸಿದಾಗ, ಈಗಾಗಲೆ ಸಚಿವರು ಆಂಧ್ರದ ನೀರಾವರಿ ತಜ್ಞ ಯಲ್ಲಾರೆಡ್ಡಿ ಅವರನ್ನು ಸಂಪರ್ಕಿಸಿ ಬಲದಂಡೆ ಭಾಗ ವೀಕ್ಷಣೆ ಮಾಡಿಸಿ ಅಭಿಪ್ರಾಯ ಪಡೆಯಬೇಕೆಂದು ಆದೇಶಿಸಿದ್ದಾರೆಂದು ತಿಳಿಸಿದರು.