ಎಲ್ಲೆಡೆ ಗೌರಿ ಹುಣ್ಣಿಮೆ ಸಂಭ್ರಮ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ನ. 17
ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಹೆಂಗಳೆಯರ ಹಬ್ಬವೆಂದೇ ಖ್ಯಾತಿ ಪಡೆದಿರುವ ಗೌರಿ ಹುಣ್ಣಿಮೆಯ ಸಡಗರ ಕೊಟ್ಟೂರು ಸೇರಿದಂತೆ ಎಲ್ಲೆಡೆ ಭಾನುವಾರದಿಂದ ಆರಂಭಗೊಂಡಿದೆ. ಗೌರಿ ದೇವಿಗೆ ಸಕ್ಕರೆಯಿಂದ ತಯಾರಿಸಿದ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಈ ಹಬ್ಬದ ವಿಶೇಷ.
ಗೌರಿ ಹಬ್ಬ ವರ್ಷಕ್ಕೆ ಎರಡು ಬಾರಿ ಬರುತ್ತದೆ. ಸೀಗೆ ಹುಣ್ಣಿಮೆಯಂದು ಸಣ್ಣ ಗೌರಿ ಹುಣ್ಣಿಮೆ ನಡೆದರೆ, ಈ ಭಾನುವಾರ ದೊಡ್ಡ ಗೌರಿ ಹುಣ್ಣಿಮೆ ಹಬ್ಬ. ಈ ಎರಡು ದಿನಗಳಂದು ಗೌರಿದೇವಿಯನ್ನು ಅಲಂಕರಿಸಿ, ಪೂಜಿಸಿ ಮಹಿಳೆಯರು ಸೇರಿದಂತೆ ಪುರುಷರು ನಮಿಸುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಆರತಿ ಬೆಳಗಿದ ಮನೆಯ ಹೆಣ್ಣು ಮಕ್ಕಳಿಗೆ ಕುಟುಂಬದಲ್ಲಿನ ಪುರುಷರು ಕಾಣಿಕೆ ನೀಡುತ್ತಾರೆ.
ಗೌರಿ ಹುಣ್ಣಿಮೆಯಿಂದ ಮೂರು ದಿನಗಳವರೆಗೆ ನಡೆಯುವ ಗೌರಿ ದೇವಿ ಹಬ್ಬವನ್ನು ಬಹುತೇಕ ಪ್ರತಿ ಮನೆಯಲ್ಲೂ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆಕಳ ಸಗಣಿಯಿಂದ ಹಟ್ಟಿ ಮಾಡಿ ದೇವಿ ಮೂರ್ತಿಯನ್ನು ಸ್ಥಾಪಿಸಿ ಪೂಜೆ ಮಾಡುತ್ತಾರೆ. ಸುಗ್ಗಿಕಾಲ ಕಳೆಯಲು ಹತ್ತಿರವಾಗುತ್ತಿರುವಾಗ ಈ ಹಬ್ಬ ಬಂದಿರುವುದರಿಂದ ವಿಶೇಷವಾಗಿ ರೈತಾಪಿ ವರ್ಗದವರ ಮನೆಗಳಲ್ಲಿ ಸಂಭ್ರಮ ಹೆಚ್ಚಾಗಿರುತ್ತಾರೆ.
ಗೌರಿ ಮೂರ್ತಿ ಪ್ರತಿಷ್ಠಾಪನೆ: ಹಬ್ಬಕ್ಕೆಂದೆ ಗೌರಿ ದೇವಿಯನ್ನು ಹಲವೆಡೆ ಪ್ರತಿಷ್ಠಾಪಿಸಲು ಗುರುತಿಸಿದ ಸ್ಥಳಗಳಲ್ಲಿ ಸಂಬಂಧಪಟ್ಟವರು ಬನ್ನಿಮರದ ಕೆಳಗೆ ಸಿಗುವ ಮಣ್ಣನ್ನು ತೆಗೆದುಕೊಂಡು ಗೌರಿದೇವಿ ಮೂರ್ತಿ ತಯಾರಿಸುತ್ತಾರೆ. ಇದಕ್ಕೆ ಕಡ್ಲೆ ಹಿಟ್ಟನ್ನು ಬೆರೆಸುವುದು ವಿಶೇಷ. ಹೀಗಾಗಿ ಕಡ್ಲಿಹಿಟ್ಟಿನ ಗೌರಮ್ಮ ಎಂದೇ ಗೌರಿದೇವಿಯನ್ನು ಈ ದಿನಗಳಲ್ಲಿ ಕರೆಯಲಾಗುತ್ತದೆ. ಕೊಟ್ಟೂರಿನಲ್ಲಿ ಗೌರಿದೇವಿಯನ್ನು ಈ ಹಬ್ಬದಂದು ಕೂರಿಸಲು ಇಲ್ಲಿನ ತೊಟ್ಟಿಲು ಮಠದ ಬಳಿ ಪ್ರತ್ಯೇಕ ಮನೆಯಿದೆ. ಈ ಮನೆಯವರು ಪೂಜಿಸುವ ಗೌರಿದೇವಿಗೆ ಮಹಿಳೆಯರು ಸಾಮೂಹಿಕವಾಗಿ ಸಕ್ಕರೆ ಆರತಿಯ ಆರತಿ ಬೆಳಗಿ ನೈವೇದ್ಯ ಸಮರ್ಪಿಸುತ್ತಾರೆ.
15 ದಿನದಿಂದ ತಯಾರಿ: ಸಕ್ಕರೆ ಆರತಿಗಳನ್ನು ಕಟ್ಟಿಗೆಗಳಿಂದ ನಿರ್ಮಿಸಲಾದ ಅಚ್ಚುಪಡೆಗಳಲ್ಲಿ ಸಕ್ಕರೆಯ ಪಾಕ ಹಾಕುವ ಮೂಲಕ ಸಕ್ಕರೆ ಆರತಿಗಳನ್ನು ತಯಾರು ಮಾಡುತ್ತಾರೆ.
ನವಿಲು, ಶಿವ ಪಾರ್ವತಿ, ಆನೆ, ಗೋಪುರದ ಚಿತ್ರಗಳನ್ನು ಹೋಲುವ ಆಕಾರಗಳ ಗೊಂಬೆಗಳನ್ನು ತಯಾರಿಸುತ್ತಾರೆ. ಇದಕ್ಕೆಂದೇ ಪ್ರತಿ ಊರಿನಲ್ಲಿ 2ರಿಂದ 3 ಜನ ಆರತಿ ತಯಾರಕರು ಹಬ್ಬ ಬರುವ 15 ದಿನಗಳ ಮುನ್ನ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಕ್ಕರೆಗೆ ನೀರು, ತುಸು ನಿಂಬೆ ರಸ ಬೆರೆಸಿ ಕುದಿಸಿ ಒಂದು ಹಂತಕ್ಕೆ ಬಂದಾಗ ಪಾಕವನ್ನು ಆಕಾರಗಳಲ್ಲಿ ಹಾಕಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ.
ಸಕ್ಕರೆ ಆರತಿಗಳನ್ನು ತಯಾರು ಮಾಡುವುದನ್ನೇ ತಿಂಗಳ ಉದ್ದಕ್ಕೂ ಉದ್ಯೋಗವನ್ನಾಗಿಸಿಕೊಂಡು ಹಣ ಗಳಿಸುತ್ತಾರೆ. ಪ್ರತಿ ತಯಾರಕರು 30ರಿಂದ 50 ಕ್ವಿಂಟಲ್ ಸಕ್ಕರೆಯನ್ನು ಇದಕ್ಕೆಂದೆ ಬಳಸುತ್ತಾರೆ. ಒಂದು ಕ್ವಿಂಟಲ್ ಸಕ್ಕರೆಗೆ ಸುಮಾರು 60 ಹೆಚ್ಚು ಕೆ.ಜಿ. ಸಕ್ಕರೆ ಗೊಂಬೆಗಳಾಗುತ್ತವೆ. ಅತ್ತ ಗೌರಿ ಹಬ್ಬದಲ್ಲಿ ಆರತಿ ಬೆಳಗಿ ಹಬ್ಬ ಆಚರಿಸಿದರೆ ಇತ್ತ ಸಕ್ಕರೆ ಗೊಂಬೆಗಳನ್ನು ತಯಾರಿಸಿ ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಾರೆ ತಯಾರಕರು.
ಪದ್ಧತಿ ಮತ್ತು ಪರಂಪರೆಯ ಪ್ರತೀಕವಾಗಿ ಈ ಗೌರಿ ಹಬ್ಬ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಮುಂದಿನ ಪೀಳಿಗೆ ಈ ಬಗೆಯ ಹಬ್ಬವನ್ನು ಇದೆ ತೆರನಾಗಿ ಆಚರಿಸುವ ಮೂಲಕ ದಿನನಿತ್ಯದ ಜಂಜಾಟದ ಬದುಕಿನಲ್ಲಿ ಇಂತಹ ಸಡಗರ ಸಂಭ್ರಮದಲ್ಲಿ ಪಾಲ್ಗೊಳ್ಳುವುದರಲ್ಲಿ ಸಂತಸ ಮತ್ತು ನೆಮ್ಮದಿಯನ್ನು ಜನತೆ ಕಾಣಬಯಸುತ್ತಾರೆ.
- ಜಿ. ಸೋಮಶೇಖರ