ಕೋಮು ಸೌಹಾರ್ದ ವೇದಿಕೆ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 17
ಭಾರತೀಯ ಜನತಾ ಪಕ್ಷ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೂ ಕೋಮುವಾದಿಗಳಿಂದ ಸಾಮಾನ್ಯ ಜನರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ವಿ.ಎನ್. ರೆಡ್ಡಿ ಮಾತನಾಡಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಇದಕ್ಕೆ ಎನ್‌ಡಿಎ ಬೆಂಬಲ ಸೂಚಿಸಿದೆ. ಈ ಹಿನ್ನೆಲೆಯಲ್ಲಿ 2014ರ ಲೋಕಸಭಾ ಚುನಾವಣೆ ಮುಗಿಯುವುದರೊಳಗಾಗಿ ಯಾವ ಸಮಯದಲ್ಲಿ ಏನಾಗುವುದೋ ಎಂಬುದೇ ತಿಳಿಯದಾಗಿದೆ. ಮತಬ್ಯಾಂಕ್‌ಗಾಗಿ ಕೋಮುವಾದಿಗಳು ದೋಂಬಿ, ದೌರ್ಜನ್ಯಗಳನ್ನು ನಡೆಸಬಹುದು. ಸಾಮಾನ್ಯ ಜನ ಜೀವನದಲ್ಲಿ ಅಶಾಂತಿಯುಂಟು ಮಾಡಬಹುದು. ಹೀಗಾಗಿ ಚುನಾವಣೆ ಮುಗಿಯುವವರೆಗೂ ಕೋಮುವಾದಿಗಳಿಂದ ಕಟ್ಟೆಚ್ಚರ ವಹಿಸಬೇಕು. ಜಿಲ್ಲೆ ಹಾಗೂ ರಾಜ್ಯಾದ್ಯಂತ ಜನರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ವೇದಿಕೆ ಕಾರ್ಯಕರ್ತರು ಅನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಗಿರಿಮಲ್ಲಪ್ಪ, ಎಚ್. ಅರ್ಜುನ್, ಎಂ.ವಿ. ಎರುಕುಲಸ್ವಾಮಿ, ಎ. ಮಾನಯ್ಯ, ಕೆಂಚಪ್ಪ, ಸದಾಶಿವಪ್ಪ, ಪರಶುರಾಮುಡು, ಕೆ. ಮಲ್ಲಿಕಾರ್ಜುನ್, ಸಿದ್ದೇಶ್, ಎ.ಕೆ. ಗಂಗಾಧರ, ಕಮಲಾ ಬಸವರಾಜ್, ಕುಮಾರ್, ಪ್ರಕಾಶ್, ಅಸ್ಲಂಬಾಷಾ ಮತ್ತಿತರರು ಪಾಲ್ಗೊಂಡಿದ್ದರು.