ಪ್ರಗತಿ, ನೀತಿ, ಶಾಂತಿ ಕಾರ್ಯಕ್ರಮ
ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಶಾರದಾ ವಿದ್ಯಾಪೀಠ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಬೆಳೆಸುವ ಉದ್ದೇಶದಿಂದ ಬ್ರಾಹ್ಮಿನ್ ಎಜುಕೇಷನ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಪ್ರಗತಿ, ನೀತಿ ಮತ್ತು ಶಾಂತಿ ಎಂಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಈಚೆಗೆ ಜರುಗಿತು. ಟ್ರಸ್ಟಿ ಅನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಟ್ರಸ್ಟಿ ಕೆ.ಬಿ. ಪ್ರಸಾದ್, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೊಸಪೇಟೆ: ಅಯ್ಯಪ್ಪ ಭಕ್ತರಿಗೆ ಅನ್ನದಾನ
ಹೊಸಪೇಟೆ: ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಸ್ವಾಮಿಗಳಿಗೆ ನ. 16ರಿಂದ ಜ. 14ರ ವರೆಗೆ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2.30ರ ವರೆಗೆ ಅನ್ನದಾನ ಕಾರ್ಯಕ್ರಮವನ್ನು ನಗರದ ನೆಹರೂ ಕಾಲನಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಭಕ್ತಾದಿಗಳು ತನು, ಮನ, ಧನದಿಂದ ಸಹಕರಿಸುವಂತೆ ದೇವಸ್ಥಾನದ ಮುಖ್ಯ ಅರ್ಚಕರು ಮತ್ತು ಗುರುಸ್ವಾಮಿಗಳಾದ ಇ.ಎನ್.ಎಸ್. ನಂಬೂದ್ರಿಸ್ವಾಮಿಗಳು ಹೇಳಿದರು. ನಗರದಲ್ಲಿ ಶುಕ್ರವಾರ ನೆಹರೂ ಕಾಲನಿಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂದಿನ ಬಯಲು ನಿವೇಶನದಲ್ಲಿ ಅನ್ನದಾನ ಮಂಟಪದ ಉದ್ಘಾಟನಾ ಸಮಾರಂಭದ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಂಡಲಪೂಜೆ ಮತ್ತು ಮಕರಜ್ಯೋತಿ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಭಕ್ತಾದಿಗಳು ಪೂಜೆಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕು ಎಂದು ಅವರು ಹೇಳಿದರು.