ತಕ್ಷಣ ಖರೀದಿ ಕೇಂದ್ರ ಆರಂಭಿಸಿ
ಹಗರಿಬೊಮ್ಮನಹಳ್ಳಿ: ರೈತರು ಬೆಳೆದ ಫಸಲು ಮುಗಿಯುತ್ತ ಬಂದರೂ ಇನ್ನೂ ಕೂಡ ತಾಲೂಕಿನಲ್ಲಿ ಮೆಕ್ಕೆಜೋಳ, ಬತ್ತದ ಖರೀದಿ ಕೇಂದ್ರವನ್ನು ಏಕೆ ತೆರೆಯುತ್ತಿಲ್ಲ? ರೈತರ ಬಳಿ ದಾಸ್ತಾನು ಮುಗಿದ ಮೇಲೆ ಖರೀದಿ ಕೇಂದ್ರ ತೆರೆದರೆ ಏನು ಪ್ರಯೋಜನ? ಇಲ್ಲಿನ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಸರ್ಕಾರದ ಸೌಲಭ್ಯ ತಾಲೂಕಿನ ರೈತರಿಗೆ ತಲುಪುತ್ತಿಲ್ಲ ಎಂದು ತಾಪಂ ಸದಸ್ಯ ಉಪ್ಪಾರ ಬಾಲಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಇಳಿಕೆಯಿಂದ ಕಂಗಾಲಾಗಿರುವ ಬತ್ತ, ಮೆಕ್ಕೆಜೋಳ ಬೆಳೆಗಾರರನ್ನು ರಕ್ಷಿಸಲು ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿದೆ ಎಂದರು. ಇದಕ್ಕುತ್ತರಿಸಿದ ತಾಪಂ ಇಒ ಬಿ.ಎಂ.ಎಸ್. ವೀರಯ್ಯ, ತಹಸೀಲ್ದಾರ್ ಜತೆಗೆ ಚರ್ಚಿಸಿ ಖರೀದಿ ಕೇಂದ್ರ ಆರಂಭಿಸಲು ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.
ಕಠಿಣಕ್ರಮದ ಎಚ್ಚರಿಕೆ: ತಾಲೂಕಿನ ಯಾವುದೆ ಸರ್ಕಾರಿ ಕಾರ್ಯಕ್ರಮಗಳಿಗೆ ಚುನಾಯಿತ ಜನಪ್ರತಿನಿಧಿಗಳನ್ನು ಅಲಕ್ಷಿಸಿದ್ದಾಗಲಿ, ಇಲ್ಲವೆ ಅವರನ್ನು ಅಗೌರವದಿಂದ ಕಾಣುತ್ತಿದ್ದಾರೆ ಎಂಬ ದೂರುಗಳು ಬಂದರೆ ಆಯಾ ಇಲಾಖೆಗಳ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ನಿರ್ಲಕ್ಷಿಸಿರುವ ದೂರುಗಳು ಜನಪ್ರತಿನಿಗಳಿಂದ ಬಂದಿದ್ದೇ ಆದರೆ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಇಒ ಎಚ್ಚರಿಕೆ ನೀಡಿದರು.
ಅಸಹಾಯಕರಾಗಿದ್ದೇವೆ: ಚುನಾಯಿತ ಸದಸ್ಯರೇ ಇವತ್ತು ತನಗೊಂದು, ನಿನಗೊಂದು ಎಂಬಂತೆ ಮನೆಗಳನ್ನು ಹಂಚಿಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾದ ಬಡವರಿಗೆ ಮನೆಗಳು ಸಿಗದಂತಾಗಿದೆ. ಹೀಗಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ವಸತಿ ಯೋಜನೆಯ ಸೌಲಭ್ಯಗಳನ್ನು ಆರ್ಹ ಫಲಾನುಭವಿಗಳಿಗೆ ತಲುಪಿಸಲು ನಮ್ಮಿಂದಲೂ ಸಾಧ್ಯವಾಗುತ್ತಿಲ್ಲ. ಎಲ್ಲಗೊತ್ತಿದ್ದರೂ ಮನೆ ಹಂಚಿಕೆ ವಿಚಾರದಲ್ಲಿ ನಾವು (ಅಧಿಕಾರಿಗಳು) ಒಂದು ರೀತಿಯಲ್ಲಿ ಅಸಹಾಯಕರಾಗಿದ್ದೇವೆ ಎಂದು ಇಒ ವೀರಯ್ಯ ತಮ್ಮ ಅಳಲು ತೋಡಿಕೊಂಡರು.
ಅಂಗನವಾಡಿ ಕೇಂದ್ರ ನಿರ್ಮಾಣ: ತಾಲೂಕಿನ ಗದ್ದಿಕೇರಿ, ಮಾದೂರು, ದಶಮಾಪುರ ಗ್ರಾಮಗಳಲ್ಲಿ ಬಾಡಿಗೆ ಮನೆಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದು, ಕಾಯಂ ಕಟ್ಟಡದ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯೆ ಮಂಜುಳಾ ಕೃಷ್ಣನಾಯ್ಕ, ಹುಲಿಗೆಮ್ಮ ಹನುಮಜ್ಜ ಒತ್ತಾಯಿಸಿದರು. ನಬಾರ್ಡ್ನಡಿ ತಾಲೂಕಿಗೆ ರು. 35.25 ಲಕ್ಷ ಅನುದಾನ ಬಂದಿದೆ. ಅದರಲ್ಲಿ ಈ ಮೂರು ಗ್ರಾಮಗಳಲ್ಲಿ ತಲಾ ರು. 12 ಲಕ್ಷದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲಾಗುವುದು. ಸಂಬಂಧಿಸಿದ ಗ್ರಾಪಂನವರು ಸ್ಥಳ ನೀಡುವಂತೆ ವೀರಯ್ಯ ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು. ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪೂರ್ಯನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಾಗರತ್ನ ವೆಂಕಟೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಬೆಣಕಲ್ ಪ್ರಕಾಶ, ಸದಸ್ಯರಾದ ಭಾರತಮ್ಮ ಬೆಲ್ಲದ್, ಗಂಗಮ್ಮ, ಲಕ್ಷ್ಮವ್ವ, ಲೋಹಿತ್, ಸಾವಿತ್ರಮ್ಮ, ಉಮೇಶ, ಶಿವಕುಮಾರ್, ಪಂರಾಇನ ಅಂಜನೇಯ ಶೆಟ್ಟಿ, ಬಿಇಒ ಕೆ. ರಾಮನಗೌಡ, ಸಿಡಿಪಿಒ ಸೋಮ್ಮಣ್ಣ ಚಿನ್ನೂರು, ತೇನಸಿಂಗ್ ನಾಯ್ಕ, ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒ, ಕಾರ್ಯದರ್ಶಿಗಳು ಹಾಜರಿದ್ದರು.