ಸಂಭ್ರಮದ ಗೌರಿಹಬ್ಬ ಆಚರಣೆ
ಕಂಪ್ಲಿ: ಪಟ್ಟಣದ ಪೇಟೆಬಸವೇಶ್ವರ ದೇವಸ್ಥಾನದಲ್ಲಿ ಗೌರಿಹಬ್ಬ ನಿಮಿತ್ತ ಸ್ಥಾಪಿಸಿದ ಗೌರಿದೇವಿಗೆ ಸುಮಂಗಲೆಯರು ಮತ್ತು ಮಕ್ಕಳು ಸೋಮವಾರ ಶ್ರದ್ಧಾ ಭಕ್ತಿಯಿಂದ ಸಕ್ಕರೆ ಆರತಿ ಬೆಳಗಿ ಸಂಭ್ರಮದಿಂದ ಹಬ್ಬ ಆಚರಿಸಿದರು.
ಗೌರಿ ಹುಣ್ಣಿಮೆಗೆ 3 ದಿನ ಮುಂಚಿತವಾಗಿಯೇ ದೇವಸ್ಥಾನದಲ್ಲಿ ಮಣ್ಣಿನ ಬಣ್ಣ, ಬಣ್ಣದ ಗೌರಿ ಮೂರ್ತಿಯನ್ನು ಸ್ಥಾಪಿಸಲಾಗಿದ್ದು, ಸತತ 5 ದಿನಗಳ ಕಾಲ ಸುಮಂಗಲೆಯರು ಹಾಗೂ ಮಕ್ಕಳು ಗೌರಿ ದೇವಿಯನ್ನು ಪೂಜಿಸಿ ಸಂಭ್ರಮದಿಂದ ಸಕ್ಕರೆ ಆರತಿ ಮಾಡುತ್ತಾರೆ ಎಂದು ಕಂಪ್ಲಿ ಪೇಟೆ ಬಸವೇಶ್ವರ ದೇವಸ್ಥಾನದ ಅರ್ಚಕ ಬಸವರಾಜಸ್ವಾಮಿ ತಿಳಿಸಿದರು.
ಗೌರಿ ಹುಣ್ಣಿಮೆ ಮರುದಿನ 5ನೇ ದಿನಕ್ಕೆ ಅಂದರೆ ಸೋಮವಾರ ಸರಿಯಾಗಿ ರಾತ್ರಿ ಸುಮಂಗಲೆಯರು ಗೌರಿಮೂರ್ತಿಯನ್ನು ವಿಶೇಷವಾಗಿ ಪೂಜಿಸಿ, ಗೌರಿಗೆ ಇಷ್ಟವಾದ ಚೆಂಡು ಹೂವಿನ ಹಾರ, ಸೂಸುಗ, ಬಾಳೆಹಣ್ಣು, ಬಾರೆಹಣ್ಣು, ಕರ್ಚಿಕಾಯಿ, ಸಜ್ಜೆ ಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ಹಸೇ ಹಿಟ್ಟು ನೈವೇದ್ಯ ಮಾಡಿ, ಮಹಾಮಂಗಳಾರತಿ ನೆರವೇರಿಸುತ್ತಾರೆ. ಮನೆಯವರೆಲ್ಲರ ಆಯುಷ್ಯ, ಆರೋಗ್ಯ ಸಮೃದ್ಧಿಗಾಗಿ ಸಕ್ಕರೆ ಆರತಿ ಮಾಡಿ, ಕಳಸ, ಕನ್ನಡಿಯೊಂದಿಗೆ ಗೌರಿಪದ ಮತ್ತು ಭಜನೆ ಪದ ಹಾಡುತ್ತ, ಮಂಗಳವಾದ್ಯಗಳ ಸಂಗಡ ಬಾವಿ, ಕೆರೆ, ಕಾಲುವೆ, ನದಿಗಳಿಗೆ ಮೆರವಣಿಗೆ ಮೂಲಕ ತೆರಳಿ ಗಂಗೆ ಪೂಜೆ, ಸಪ್ತಮಾತೃಕೆಯರ ಪೂಜೆ ತರುವಾಯ ಗೌರಿಮೂರ್ತಿ ಪೂಜೆ ನೆರವೇರಿಸಿ, ಗಂಗೆಗೆ ವಿಸರ್ಜಿಸಿ ಭಕ್ತಿ ಸಮರ್ಪಿಸಿದರು.
ಕಂಪ್ಲಿ ಪಟ್ಟಣದ ಪೇಟೆ ಬಸವೇಶ್ವರ, ಕೂಲಿ ಕಟ್ಟೆ ಬಸವೇಶ್ವರ, ನಗರೇಶ್ವರ, ಬಣ್ಣದ ಚೌಡೇಶ್ವರಿ, ಬನಶಂಕರಿ, ಆನೆಮಠ, ದ್ಯಾವಮ್ಮ, ನಿಮಿಷಾಂಬಾ, ಕೆಂಚಮ್ಮ, ಕಾಳಿಕಾ, ಮೂಕುಮಾರೆಮ್ಮ, ಬನ್ನಿಮಹಾಂಕಾಳಿ, ಭ್ರಮರಾಂಬಿಕಾ ದೇವಸ್ಥಾನ ಸೇರಿದಂತೆ ಇತ್ಯಾದಿ ದೇವಸ್ಥಾನಗಳಲ್ಲಿ ಗೌರಿಮೂರ್ತಿ ಸ್ಥಾಪಿಸಿ ವಿಶೇಷವಾಗಿ ಪೂಜಿಸಲಾಯಿತು.