ತೆಪ್ಪೋತ್ಸವಕ್ಕೆ ಹಂಪಸಾಗರ ಸಜ್ಜು
ಹಗರಿಬೊಮ್ಮನಹಳ್ಳಿ: ಉತ್ತರ ಭಾರತದ ಗಂಗಾ ನದಿಯ ದಡದಲ್ಲಿ ನಡೆಯುವ ಗಂಗಾ ಮಾತೆಯ ಆರಾಧನೆಯನ್ನು ನೆನಪಿಸುವ ಗಂಗಾಂಬಿಕಾ ತೆಪ್ಪೋತ್ಸವ ಇಲ್ಲಿ ಅದ್ಧೂರಿಯಾಗಿ ನಡೆಯುತ್ತದೆ. ಅದು ಒಂದು ಹಳ್ಳಿಯಲ್ಲಿ ಎನ್ನುವುದು ಮತ್ತೊಂದು ವಿಶೇಷ.
ಹೌದು, ತಾಲೂಕಿನ ಗಡಿಗ್ರಾಮ, ತುಂಗಭದ್ರಾ ನದಿ ಪಕ್ಕದಲ್ಲಿರುವ ಹಂಪಾಸಾಗರ ಗ್ರಾಮದಲ್ಲಿ ಪ್ರತಿವರ್ಷ ಜರುಗುವ ಗಂಗಾಂಬಿಕಾ ತೆಪ್ಪೋತ್ಸವಕ್ಕೆ ಈ ಊರು ತುಂಬಾ ಪ್ರಸಿದ್ಧಿ. ತೆಪ್ಪೋತ್ಸವ ಒಂದು ದಿನ ಮಾತ್ರ ನಡೆದರೆ ಎರಡ್ಮೂರು ದಿನಗಳ ಕಾಲ ಜಾತ್ರೆ ಜರುಗುತ್ತದೆ.
ಈ ತೆಪ್ಪೋತ್ಸವ ನೋಡಲೆಂದು ಜಿಲ್ಲೆಯ ವಿವಿಧ ತಾಲೂಕುಗಳ ಜನತೆ, ನದಿ ಪಕ್ಕದ ಮುಂಡ್ರಿಗಿ, ಕೊಪ್ಪಳ, ಹಾವೇರಿ, ಗುತ್ತಲ, ಗದಗ ಸೇರಿದಂತೆ ಹತ್ತಾರು ತಾಲೂಕಿನ ನೂರಾರು ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ರೈತರು ಕುಟುಂಬ ಸಮೇತರಾಗಿ ಬಂದು ಗಂಗಾಮಾತೆಗೆ ಪೂಜೆ ಸಲ್ಲಿಸಿ ಮನೆ ಮಂದಿಗೆಲ್ಲ ಆರೋಗ್ಯ ದಯಪಾಲಿಸಿ, ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸುತ್ತಾರೆ. ವರ್ಷದ ಕೊನೆಯಲ್ಲಿ ನಡೆಯುವ ಗಂಗಾಂಬಿಕಾ ತೆಪ್ಪೋತ್ಸವ ಗಂಗಮ್ಮನ ಜಾತ್ರೆ ಎಂದೇ ಈ ಭಾಗದಲ್ಲಿ ಖ್ಯಾತಿಗಳಿಸಿದೆ.
ಗಂಗೆಯೇ ಸರ್ವಶಕ್ತಿ: ತುಂಗಭದ್ರಾ ಜಲಾಶಯದ ಹಿನ್ನೀರನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಕೃಷಿಕ ಹಾಗೂ ಕೃಷಿ ಕಾರ್ಮಿಕ ಕುಟುಂಬಗಳು, ಕೃಷಿಯನ್ನೆ ಅವಲಂಬಿಸಿರುವ ವ್ಯಾಪಾರಿಗಳು, ಮಾರಾಟಗಾರರು, ಹೊಟೇಲ್ಗಳು, ಪರ್ಯಾಯ ಉದ್ಯೋಗ ಅವಲಂಬಿಸಿರುವ ಸಾಕಷ್ಟು ಕುಟುಂಬಗಳು ಹಂಪಾಸಾಗರ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ನೆಲೆಸಿವೆ. ಹೀಗಾಗಿ ಇವರೆಲ್ಲರ ಪಾಲಿಗೆ ಇಲ್ಲಿನ ಗಂಗೆಯೇ ಸರ್ವಶಕ್ತಿ. ಗಂಗೆ ಇಲ್ಲದೆ ಈ ಭಾಗದಲ್ಲಿನ ಜನಜೀವನ ಕ್ರಮ ಊಹಿಸಲು ಅಸಾಧ್ಯ. ಹೀಗಾಗಿ ತುಂಗಭದ್ರೆ ಈ ಭಾಗದ ಸಾವಿರಾರು ಕುಟುಂಬಗಳ ಪಾಲಿಗೆ ಅನ್ನ ನೀಡುವ ಸಾಕ್ಷತ್ ಅನ್ನಪೂಣೇಶ್ವರಿ. ಈಕೆಯ ದಡದಲ್ಲೇ ಇಂದು ತೆಪ್ಪೋತ್ಸವ ನಡೆಯಲಿದೆ.
50 ವರ್ಷಗಳಿಂದ ಆಚರಣೆ: ಗಂಗಾಂಬಿಕಾ ತೆಪ್ಪೋತ್ಸವಕ್ಕೆ ಸುಮಾರು 300 ವರ್ಷಗಳಷ್ಟು ಇತಿಹಾಸವಿದೆ ಎನ್ನುತ್ತಾರೆ ಗ್ರಾಮದ ಹಿರಿಯರು. ತುಂಗಾಭದ್ರಾ ನದಿಗೆ ಹೊಸಪೇಟೆ ಬಳಿ ಅಡ್ಡಲಾಗಿ ಆಣೆಕಟ್ಟು ಕಟ್ಟಿದ್ದರಿಂದ ಹಿನ್ನೀರಿನಲ್ಲಿ ಹಂಪಾಸಾಗರ ಗ್ರಾಮ ಮುಳುಗಡೆಯಾಯಿತು. ಆಗ ಹಂಪಾಸಾಗರ- 1, ಹಂಪಾಸಾಗರ- 2 ಹಾಗೂ ಹಂಪಾಸಾಗರ- 3 ಎಂದು ಕಾಲೋನಿಗಳನ್ನು ಮಾಡಿ ಮೂರು ಸ್ಥಳಗಳಲ್ಲಿ ಪುನರ್ ವಸತಿ ಕಲ್ಪಿಸಲಾಯಿತು. ಈ ಮೂರು ಊರುಗಳಲ್ಲಿ ಕಳೆದ ಐವತ್ತು ವರ್ಷಗಳಿಂದ ಗಂಗಾಂಬಿಕಾ ತೆಪ್ಪೋತ್ಸವ ಆಚರಿಸಲಾಗುತ್ತಿದೆ ಎನ್ನುತ್ತಾರೆ ಹಿರಿಯರಾದ ಕೆ. ಶ್ರೀನಿವಾಸ್.
ಇಂದಿನಿಂದ ತೆಪ್ಪೋತ್ಸವ: ಅಂದಹಾಗೆ ಈ ಬಾರಿಯ ತೆಪ್ಪೋತ್ಸವ ನ. 20ರಂದು ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಗ್ರಾಮದ ಚೌಕಿ ಮನೆಯಿಂದ ಪೂಜಾಲಂಕೃತ ಗಂಗೆಮಾತೆಯ ಮೂರ್ತಿಯನ್ನು ಮೆರವಣಿಗೆ ಮೂಲಕ ಗ್ರಾಮದ ಎಲ್ಲ ಬೀದಿ, ಕಾಲೋನಿಗಳಲ್ಲಿ ಕರೆತರಲಾಗುತ್ತದೆ. ಮೆರವಣಿಗೆ ಸಂಜೆ 6 ಗಂಟೆ ಹೊತ್ತಿಗೆ ನದಿ ದಂಡೆ ತಲುಪುತ್ತದೆ. ಅಲ್ಲಿ ಗಂಗಾಮಾತೆ ಮೂರ್ತಿಗೆ ಪೂಜೆ ಸಲ್ಲಿಸಿ ತೆಪ್ಪವನ್ನು ನದಿಯಲ್ಲಿ ಹರಿಬಿಡಲಾಗುತ್ತದೆ. ಈ ಸಂದರ್ಭದಲ್ಲಿ ನದಿ ದಂಡೆ ಮೇಲೆ ಭಕ್ತರು ಸಾವಿರಾರು ದೀಪಗಳನ್ನು ಹಚ್ಚಿ ನದಿಯಲ್ಲಿ ಬಿಡುವುದನ್ನು ನೋಡುವುದೇ ಒಂದು ಹಬ್ಬ. ದೀಪ ಬಿಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸುತ್ತಾರೆ ಭಕ್ತರು.
ನ. 20, 21ರಂದು ನಾಟಕ, ಸಂಗೀತ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೊಂಬೆ ಕುಣಿತ, ಡೊಳ್ಳು ಬಡಿತ, ಹಲಗೆ ವಾದನ, ತಾಸೀ ವಾದನ ತಂಡಗಳು ಕಲಾಪ್ರದರ್ಶನ ನೀಡಲಿವೆ.
ಗ್ರಾಮಕ್ಕೆ ಬರಲು...
ತಾಲೂಕು ಕೇಂದ್ರದಿಂದ 22 ಕಿ.ಮೀ. ದೂರದಲ್ಲಿರುವ ಹಂಪಾಸಾಗರಕ್ಕೆ ಹಗರಿಬೊಮ್ಮನಹಳ್ಳಿಯಿಂದ ಸಾಕಷ್ಟು ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆಯಿದೆ. ಹೂವಿನಹಡಗಲಿಯಿಂದ ಸಾಕಷ್ಟು ಸಾರಿಗೆ ಬಸ್, ಖಾಸಗಿ ವಾಹನಗಳು ಸಂಚರಿಸುತ್ತವೆ.
ಹುಳ್ಳಿ ಪ್ರಕಾಶ