ರಾಮಧ್ಯಾನ ಚರಿತ್ರೆದಲ್ಲಿ ಕಂದಕದ ಅನಾವರಣ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 19
ಉಳ್ಳವರು ಹಾಗೂ ನಿರ್ಗತಿಕರ ನಡುವೆ ಇರುವ ಕಂದಕವನ್ನು ಕನಕದಾಸರು ತಮ್ಮ ರಾಮಧಾನ್ಯ ಚರಿತೆಯಲ್ಲಿ ಅನಾವರಣಗೊಳಿಸಿದ್ದಾರೆ ಎಂದು ಬಿಇಒ ಪಿ. ಸುನಂದಾ ಹೇಳಿದರು.
ಕನಕದಾಸರ ಜಯಂತಿ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಾವತಿಯ ಉಪನ್ಯಾಸಕಿ ಡಾ. ಅನ್ನಪೂರ್ಣಾ ಗೋಸ್ಬಾಳ ಅವರು ಕನಕದಾಸರ ಸಾಹಿತ್ಯದಲ್ಲಿ ಪ್ರಗತಿಪರ ಮೌಲ್ಯಗಳು ಕುರಿತು ಮಾತನಾಡಿ, ಜಾತಿ ಮತ್ತು ಮೌಢ್ಯತೆ ತೊಡೆದು ಹಾಕಿದ ಸಾಧಕ ಕನಕದಾಸರು. ಇವರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲ ವರ್ಗದ ಪ್ರತಿನಿಧಿ ಎನ್ನುವಂತೆ ಕಾಣಬೇಕಿದೆ. ವ್ಯಾಸಕೂಟ, ದಾಸಕೂಟದ ನೆಲೆಯಲ್ಲಿ ಇವರನ್ನು ನೋಡಿ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಲುವರಾಜ್ ಮಾತನಾಡಿ, ಚಾರಿತ್ರಿಕ ಘಟನೆಗಳನ್ನು ಕನಕದಾಸರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ಧಾರೆ ಎರೆದ ಅವರ ಪ್ರಗತಿಶೀಲ ಧೋರಣೆಯ ಚಿಂತನೆಯನ್ನು ಎಲ್ಲರೂ ಅವಲೋಕಿಸಬೇಕಿದೆ ಎಂದರು.
ಸಮುದಾಯ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಕೆ. ಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವಕೀಲ ಕುರಟ್ಟಿ ಯಂಕಪ್ಪ, ಎಂ. ಜಂಬಯ್ಯ ನಾಯಕ, ಪಂಚಾಯತ್ ರಾಜ್ ಇಲಾಖೆ ು ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ. ಉಮೇಶ್, ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಸಿ. ಖಾದರ್‌ವಲಿ, ಸಿಐಟಿಯು ಜಿಲ್ಲಾ ಮುಖಂಡ ಆರ್. ಭಾಸ್ಕರ್ ರೆಡ್ಡಿ ಮಾತನಾಡಿದರು. ಸಮುದಾಯದ ಮುಖಂಡ ಟಿ.ಎಂ. ನಾಗಭೂಷಣ ಸ್ವಾಗತಿಸಿದರು. ಕಾರ್ಯದರ್ಶಿ ಎ. ಕರುಣಾನಿಧಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಂ. ಸಂತೋಷ್ ವಂದಿಸಿದರು. ಎಂ. ಉಮಾಮಹೇಶ್ವರ ನಿರೂಪಿಸಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಡಿ.ಬಿ. ನಾಯ್ಕ, ಟಿ.ಎಚ್.ಎಂ. ಚಂದ್ರಶೇಖರ್, ಡಾ.ದಯಾನಂದ ಕಿನ್ನಾಳ, ಎಂ. ಉಮಾ ಮಹೇಶ್ವರ, ಅಂಜಲಿ, ನೂರ್‌ಜಹಾನ್ ಸೇರಿದಂತೆ ಇತರರು ಕವನ ವಾಚಿಸಿದರು. ಸಿರುಗಪ್ಪ ಸಮುದಾಯ ಜಿಲ್ಲಾ ಸಂಚಾಲಕ ಎಚ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ್ ಪತ್ತಾರ್, ನಾಗಪುಷ್ಪಲತಾ, ವಿಜಯಕುಮಾರ್ ಬಡಿಗೇರ್, ಸುಜಾತಾ ಕೆ., ಅನುರಾಧ ಪತ್ತಾರ್ ಕನಕದಾಸರ ಗೀತಗಾಯನ ಪ್ರಸ್ತುತ ಪಡಿಸಿದರು. ಶ್ರೀಧರ ಮರೋಳ್ ತಬಲಾ ಹಾಗೂ ವಿಜಯಕುಮಾರ್ ಬಡಿಗೇರ್ ಹಾರ್ಮೊನಿಯಂ ಸಾಥ್ ನೀಡಿದರು.