ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೆಸ್ಕಾಂ ಲೈನ್‌ಮ್ಯಾನ್ ಲೋಕಾ ಬಲೆಗೆ

Lingaraj Badiger
Updated On : 21 Nov 2013, 11:57 am

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಮಣ್ಣೂರು ಸೂಗೂರು ಗ್ರಾಮದ ಜೆಸ್ಕಾಂ ಲೈನ್‌ಮ್ಯಾನ್ ಜಿ. ಮಂಜುನಾಥ ಹಾಗೂ ಖಾಸಗಿ ಎಲೆಕ್ಟ್ರಿಷಿಯನ್ ಕೆ. ಬೆಟ್ಟಪ್ಪ ಬಳ್ಳಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನ. 16ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ವಿದ್ಯುತ್ ಮೀಟರ್ ಬೈಪಾಸ್ ವಿಚಾರವಾಗಿ ಫಿರ್ಯಾದುದಾರ ರಮೇಶ್ ಪೂಜಾರಿ ಅವರಿಂದ ರು. 700 ಲಂಚದ ಹಣ ಪಡೆಯುತ್ತಿದ್ದಾಗ ಪೊಲೀಸ್ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಆರ್. ಸಿದ್ಲಿಂಗಣ್ಣನವರ್ ತಿಳಿಸಿದ್ದಾರೆ. ಮಂಜುನಾಥ್ ಮತ್ತು ಬೆಟ್ಟಪ್ಪ ಲಂಚ ಪಡೆಯುವ ದುರುದ್ದೇಶದಿಂದ ರಮೇಶ್ ಪೂಜಾರಿ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಇವರ ಮನೆಯ ವಿದ್ಯುತ್ ಮೀಟರಿಗೆ ವೈರ್ ಇಟ್ಟು, ಮೀಟರ್ ಬೈಪಾಸ್ ಮಾಡಿ ಮೊಬೈಲ್‌ನಲ್ಲಿ ಫೋಟೋ ತೆಗೆದು ಪೊಲೀಸ್ ಕೇಸ್ ಆಗುತ್ತದೆ. ಇದಕ್ಕಾಗಿ ಎಂದು ರು. 5600 ದಂಡ ಕಟ್ಟಬೇಕೆಂದು ಬೆದರಿಸಿದ್ದರು. ರಮೇಶ್ ಅವರು ಚೌಕಾಸಿ ಮಾಡಿದಾಗ ರು. 2000 ನಿಗದಿಪಡಿಸಿ ರು. 700 ಲಂಚದ ಹಣಕ್ಕೆ ಬೇಡಿಕೆಯಿಟ್ಟಿದ್ದರು. ನ. 16ರಂದು ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಎಸ್. ಹೆಬ್ಬಾಳ ತನಿಖಾಧಿಕಾರಿಯಾಗಿದ್ದರು ಎಂದು ತಿಳಿಸಿದ್ದಾರೆ.
ಯಂತ್ರ ದೇಣಿಗೆ
ಬಳ್ಳಾರಿ: ಮಕ್ಕಳ ದಿನಾಚರಣೆ ನಿಮಿತ್ತ ಸ್ಥಳೀಯ ಮುಂಡ್ರಿಗಿ ಸಹಿಪ್ರಾ ಶಾಲೆಗೆ ಎಸ್‌ಬಿಎಂ ಎಸ್‌ಎನ್‌ಪೇಟೆ ಶಾಖೆ ಹಾಗೂ ವಿಎಸ್‌ಕೆ ವಿವಿ ಉಪನ್ಯಾಸಕಿ ಶಾಂತಾ ನಾಯ್ಕ್ ಅವರು ಕುಡಿಯುವ ನೀರು ಶುದ್ಧೀಕರಣ ಯಂತ್ರ ವನ್ನು ಈಚೆಗೆ ದೇಣಿಗೆ ನೀಡಿದರು. ಬ್ಯಾಂಕ್ ವತಿಯಿಂದ ರು. 10 ಸಾವಿರ ಮೌಲ್ಯದ ಕುಡಿವ ನೀರಿನ ಶುದ್ಧೀಕರಣ ಯಂತ್ರ ದೇಣಿಗೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಎಚ್. ಲಕ್ಷ್ಮಣ, ಶಿಕ್ಷಕರು ಇತರರಿದ್ದರು. ಶಿಕ್ಷಕ ಅಂಜಿನಿ ವಂದಿಸಿದರು.
ಇಸ್ಪೀಟ್: 7 ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, 7 ಜನರನ್ನು ಬಂಧಿಸಿ, ಅವರಿಂದ ರು. 6,660 ವಶಪಡಿಸಿಕೊಂಡಿದ್ದಾರೆ. ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗಾದಿಗನೂರಿನ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಗಾದಿಗನೂರು  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತ ಲಾರಿಗೆ ಟಿಪ್ಪರ್ ಡಿಕ್ಕಿ: ಓರ್ವ ಸಾವು
ಬಳ್ಳಾರಿ: ಹೊಸಪೇಟೆ- ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿದ್ದ 10 ಚಕ್ರದ ಲಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್‌ನ ಕ್ಲೀನರ್ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಹೊಸಪೇಟೆಯ ಜಂಬುನಾಥ್ ಗುಡ್ಡದ ತಿಮ್ಮ ಅಲಿಯಾಸ್ ತಿಮ್ಮಪ್ಪ (21) ಎಂದು ಗುರುತಿಸಲಾಗಿದೆ. ಬೈಪಾಸ್‌ನಲ್ಲಿ 10 ಚಕ್ರದ ಲಾರಿಯನ್ನು ನಿಲ್ಲಿಸಲಾಗಿತ್ತು, ಹೊಸಪೇಟೆ ಕಡೆಯಿಂದ ಬರುತ್ತಿದ್ದ ಟಿಪ್ಪರ್ ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement