ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಕಲಿ ವೈದ್ಯರ ವಿರುದ್ಧ ಎಫ್‌ಐಆರ್

Mainashree
Updated On : 23 Nov 2013, 11:00 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 22
ಜಿಲ್ಲಾ ಆಯುಷ್ ಅಧಿಕಾರಿಗಳ ತಂಡ ಶುಕ್ರವಾರ ಕಾರ್ಯಾಚರಣೆ ನಡೆಸಿ ಬಳ್ಳಾರಿ ನಗರದ ಇಬ್ಬರು ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಬೋರ್ಡ್ ನಿರ್ದೇಶಕರ ಆದೇಶದ ಮೇರೆಗೆ ಜಿಲ್ಲಾ ಆಯುಷ್ ಅಧಿಕಾರಿಗಳ ನೇತೃತ್ವದ ಟಾಸ್ಕ್‌ಫೋರ್ಸ್ ಕಮಿಟಿಯ ಮೂವರು ವೈದ್ಯಾಧಿಕಾರಿಗಳ ತಂಡ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಪೊಲೀಸರ ನೆರವಿನೊಂದಿಗೆ ಶುಕ್ರವಾರ ಬೆಳಗ್ಗೆಯಿಂದಲೆ ಕಾರ್ಯಾಚರಣೆ ಆರಂಭಿಸಿದ ತಂಡ ವೈದ್ಯ ವೃತ್ತಿ ನಡೆಸುತ್ತಿರುವವರು ಪಡೆದಿರುವ ಪದವಿ, ನೀಡುತ್ತಿರುವ ಔಷಧಿ ಹಾಗೂ ಪರವಾನಗಿ ಪಡೆದ ದಾಖಲೆಗಳನ್ನು ಪರಿಶೀಲಿಸಿದರು.
ಪದವಿ ಪಡೆದಿಲ್ಲ: ಇಲ್ಲಿನ ಬಾಪೂಜಿ ನಗರದಲ್ಲಿ ಸರೋಜ ಕ್ಲಿನಿಕ್ ಎಂಬ ಹೆಸರಿನಲ್ಲಿ ಬಿಎಎಂಎಸ್, ಬಿಎಚ್‌ಎಂಎಸ್ ಎಂದು ಬೋರ್ಡ್ ಹಾಕಿಕೊಂಡಿದ್ದ ಜೆ. ಶ್ರೀನಿವಾಸ್ ಕ್ಲಿನಿಕ್ ಮೇಲೆ ದಾಳಿ ಮಾಡಿ, ವೈದ್ಯಕೀಯ ಪದವಿ ಪ್ರಮಾಣಪತ್ರಗಳನ್ನು ಪರಿಶೀಲಿಸಿದಾಗ ಅರ್ಹ ಪದವಿ ಇಲ್ಲದೇ ಕ್ಲಿನಿಕ್ ನಡೆಸುತ್ತಿರುವುದು ಸಾಬೀತಾಗಿದೆ. ಹೀಗಾಗಿ ಜೆ. ಶ್ರೀನಿವಾಸ್‌ನನ್ನು ಪೊಲೀಸರು ವಶಕ್ಕೆ ಪಡೆದು, ನಂತರ ನಗರದ ಬ್ರೂಸ್‌ಪೇಟೆ ಠಾಣೆಗೆ ಕರೆದೊಯ್ದು ಎಫ್‌ಐಆರ್ ದಾಖಲಿಸಿದ್ದಾರೆ.
ಮಿಲ್ಲರ್‌ಪೇಟೆಯ ಡಾ. ಶಶಿಕುಮಾರ್ ಎನ್ನುವಾತ ನಡೆಸುತ್ತಿದ್ದ ಗಾಯಿತ್ರಿ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಅವ್ಯವಸ್ಥೆ ಹಾಗೂ ಸಮಯ ಮೀರಿದ ಔಷಧಿಗಳನ್ನು ಇಟ್ಟುಕೊಂಡಿದ್ದನ್ನು ಕಂಡ ಅಧಿಕಾರಿಗಳೇ ಬೆಚ್ಚಿ ಬಿದ್ದರು. ಅವಧಿ ಮುಗಿದ ಔಷಧಿ, ಬಳಕೆಯಾದ ಔಷಧಿಗಳು ಮತ್ತಿತರ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡಿರುವುದು ಸೇರಿದಂತೆ ಕ್ಲಿನಿಕ್ ನಡೆಸಲು ಬೇಕಾದ ಕನಿಷ್ಠ ಮಾನದಂಡಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ವೈದ್ಯರೆಲ್ಲ ಪರಾರಿ: ನಗರದ ಬಹುತೇಕ ಕಡೆಗಳಲ್ಲಿ ನಕಲಿ ವೈದ್ಯರ ಮೇಲೆ ದಾಳಿ ನಡೆಯುತ್ತಿದೆ ಎಂಬ ವಿಷಯ ಎಲ್ಲೆಡೆ ಹರಡುತ್ತಿದ್ದಂತೆಯೇ ವೈದ್ಯರು ಕ್ಲಿನಿಕ್‌ಗಳಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಈಗಾಗಿಯೇ ಆಯುಷ್ ಅಧಿಕಾರಿಗಳು ಸಾಕಷ್ಟು ಕಡೆ ತೆರಳಿದರೂ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲ. ಮತ್ತೆ ಕೆಲವೆಡೆ ಔಷಧಿ ವ್ಯಾಪಾರಿಗಳು ಇಲ್ಲಿ ಯಾವುದೇ ವೈದ್ಯರು ಇಲ್ಲ. ಕ್ಲಿನಿಕ್ ಇದೆಯಾದರೂ ಸಾಕಷ್ಟು ದಿನಗಳಿಂದ ಇಲ್ಲಿಗೆ ಬಂದೇ ಇಲ್ಲ ಎಂದು ಸಬೂಬು ಹೇಳಿ ವೈದ್ಯರನ್ನು ರಕ್ಷಿಸುವ ಪ್ರಯತ್ನ ಮಾಡಿದರು.
ಬೋರ್ಡ್ ಕೂಡ ನಕಲಿ: ಇದೇ ಸಂದರ್ಭದಲ್ಲಿ ಎಂಬಿಬಿಎಸ್ ಎಂದು ಕ್ಲಿನಿಕ್ ಮುಂದೆ ಬೋರ್ಡ್ ಹಾಕಿಕೊಂಡಿರುವವರು ಕೂಡ ನಕಲಿ ಎಂಬ ಅಂಶ ದಾಳಿ ವೇಳೆ ಬಯಲಾಯಿತು. ಎಂಬಿಬಿಎಸ್, ಬಿಎಎಂಎಸ್, ಬಿಎಚ್‌ಎಂಎಸ್ ಎಂದು ಬೋರ್ಡ್‌ಗಳಲ್ಲಿ ಮಾತ್ರ ನಮೂದಿಸಲಾಗಿದೆ. ಆದರೆ ಅವರಾರು ಪಕ್ಕಾ ವೈದ್ಯರಲ್ಲ ಎಂಬುದು ತಿಳಿದಿದೆ. ಈಗಾಗಲೆ ನಗರದಲ್ಲಿನ ನಕಲಿ ವೈದ್ಯರನ್ನು ಪಟ್ಟಿ ಮಾಡಲಾಗಿದೆ. ಇಂದಿನಿಂದ ನಿರಂತರ ದಾಳಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ವೈದ್ಯಾಧಿಕಾರಿ ಡಾ.ಪಿ. ಮುನಿವಾಸುದೇವರೆಡ್ಡಿ, ಡಾ. ರೂಪ್‌ಸಿಂಗ್ ರಾಥೋಡ್, ಡಾ. ಪ್ರಸಾದ್‌ಬಾಬು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement