ಪರಭಾಷಿಕರು ಅತಿಥಿಗಳಾಗಲಿ: ನಾರಾಯಣಗೌಡ
ಸಿರುಗುಪ್ಪ: ಪರ ಭಾಷಿಗರು ಅತಿಥಿಗಳಾಗಬೇಕೆ ಹೊರತು, ಆಡಳಿತಗಾರರಾಗಬಾರದು. ಅಂತೆಯೇ ಈ ಕುರಿತು ಕನ್ನಡಿಗರು ಜಾಗ್ರತೆ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದರು.
ನಗರದಲ್ಲಿ ತಾಲೂಕು ಕರವೇ ಏರ್ಪಡಿಸಿದ್ದ ಸ್ವಾಭಿಮಾನಿ ಕನ್ನಡಿಗರ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ಯ ಭಾಷಿಕರಿಂದ ರಾಜ್ಯದಲ್ಲಿ ನಡೆಯುತ್ತಿರುವ ಅತಿಕ್ರಮಣಕ್ಕೆ ಉತ್ತರಿಸುವ ಎದೆಗಾರಿಕೆ ಕನ್ನಡಿಗರಾದ ನಮಗೆ ಇದೆ. ರಾಜ್ಯದಲ್ಲಿ ಅಗ್ರಮಾನ್ಯ ಭಾಷೆ ಕನ್ನಡವಾಗಬೇಕು, ಪಾಲಕರು ಮಕ್ಕಳಿಗೆ ಕಡ್ಡಾಯ ಕನ್ನಡ ಭಾಷೆ ಕಲಿಸಿ ಕನ್ನಡ ಸಾಹಿತ್ಯ ಪರಂಪರೆ ಉಳಿಸಿ- ಬೆಳೆಸುವಲ್ಲಿ ಆಸಕ್ತಿ ತೋರಬೇಕಾದ ಅವಶ್ಯಕತೆ ಇದೆ ಎಂದರು.
ಎಮ್ಮಿಗನೂರಿನ ವಾಮದೇವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾದಿಭಾಗ್ಯ ಯೋಜನೆ ಹೆಸರನ್ನು ಕಲ್ಯಾಣ ಭಾಗ್ಯ ಎಂದು ಕರೆದಿದ್ದರೆ ಕನ್ನಡ ಪ್ರೌಢಿಮೆ ಆ ಜನಾಂಗದಲ್ಲಿಯೂ ಮೆರೆಯುತ್ತಿತ್ತು ಎಂದು ಅಭಿಪ್ರಾಯಿಸಿದರು.
ರೌಡಕುಂದಿಯ ಮರಿಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಎಂ.ಎಸ್. ಸೋಮಲಿಂಗಪ್ಪ, ಎಂ. ಪಂಪಾಪತಿಶೆಟ್ಟಿ, ಕಸಾಪ ಅಧ್ಯಕ್ಷ ಎಂ.ಪಂಪಾಪತಿ, ಡಿ. ಸೋಮಪ್ಪ, ಕರವೇ ಜಿಲ್ಲಾಧ್ಯಕ್ಷ ಜೆ.ಎಂ. ಬಸವರಾಜಸ್ವಾಮಿ, ಜಿಲ್ಲಾಧ್ಯಕ್ಷೆ ಸುಮಾರೆಡ್ಡಿ, ಆರ್.ಎಚ್.ಎಂ. ಶಾಂತಮೂರ್ತಿ, ಬಿ. ಈರಣ್ಣ, ಸಿದ್ದಾರೆಡ್ಡಿ ಗೌಡ, ಎಚ್.ಎಂ. ಮಲ್ಲಿಕಾರ್ಜುನ, ಕರವೇ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ. ಮಲ್ಲಿಕಾರ್ಜನಸ್ವಾಮಿ ಕುಂಟ್ನಾಳ್ ಇದ್ದರು.
ಗಂಗಾವತಿ ಪ್ರಾಣೇಶ್, ನರಸಿಂಹಜೋಷಿ, ಬಸವರಾಜ ಮಹಾಮನಿ ಅವರಿಂದ ಸುಮಾರು 2 ಗಂಟೆಗಳ ಕಾಲ ಹಾಸ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.