ಸುದ್ದಿ ಸಂಕ್ಷೇಪ
ಮದ್ಯ ಮಾರಾಟ ನಿಷೇಧ
ಬಳ್ಳಾರಿ: ಚೋಟಾ ಮೊಹರಂ ಹಬ್ಬದಾಚರಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟ ನಿಷೇಧಿಸಿ ಪ್ರಭಾರಿ ಜಿಲ್ಲಾ ದಂಡಾಧಿಕಾರಿ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಬಳ್ಳಾರಿ ನಗರ ಪೊಲೀಸ್ ಉಪ ವಿಭಾಗ, ಹೊಸಪೇಟೆ ಪೊಲೀಸ್ ಉಪ ವಿಭಾಗ ಹಾಗೂ ಕುರುಗೋಡು ವೃತ್ತದ ವ್ಯಾಪ್ತಿಯಲ್ಲಿ ನ. 24ರ ಬೆಳಗ್ಗೆ 6 ಗಂಟೆಯಿಂದ 25ರ ಬೆಳಗ್ಗೆ 6 ಗಂಟೆವರೆಗೆ, ಬಳ್ಳಾರಿ ಗ್ರಾಮೀಣ ವೃತ್ತ, ಸಂಡೂರು ವೃತ್ತ, ಹಡಗಲಿ ಪಟ್ಟಣದ ವ್ಯಾಪ್ತಿಯಲ್ಲಿ ನ. 23ರ ಬೆಳಗ್ಗೆ 6 ಗಂಟೆಯಿಂದ 25ರ ಬೆಳಗ್ಗೆ 6 ಗಂಟೆವರೆಗೆ ಹಾಗೂ ಕಂಪ್ಲಿ ಮತ್ತು ಕಮಲಾಪುರ ಠಾಣೆ ವ್ಯಾಪ್ತಿಯಲ್ಲಿ ನ. 23ರ ಬೆಳಗ್ಗೆ 6 ಗಂಟೆಯಿಂದ ನ. 26ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ. ಈ ಅವಧಿಯಲ್ಲಿ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಡಿಸ್ಟಲರೀಸ್ ರಾಜ್ಯದ ವಿವಿಧ ಕೆಎಸ್ಪಿಬಿಸಿಎಲ್ ಡಿಪೋಗಳಿಗೆ ದಾಸ್ತಾನು ವಿಲೇವಾರಿ ಮಾಡಲು ಅನ್ವಯವಾಗುವುದಿಲ್ಲ ಎಂದಿದ್ದಾರೆ.
ಧರಣಿಗೆ ನಿಷೇಧ
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಸಾರ್ವಜನಿಕರು ವಿಧಿ ಬದ್ಧವಾಗಿ ಉಪಯೋಗಿಸುವ ಸಾರ್ವಜನಿಕ ರಸ್ತೆಯಾದ ಕುರೇಕುಪ್ಪ, ಎಸ್. ಬಸಾಪುರ ಹಾಗೂ ವಡ್ಡು ಗ್ರಾಮದ ಮೂಲಕ ತಾಳೂರು ಗೇಟ್ಗೆ ಬರುವ ರಸ್ತೆ ಮಾರ್ಗದಲ್ಲಿ ಅಡಚಣೆ, ಶಾಂತಿಭಂಗ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಯಾವುದೇ ವ್ಯಕ್ತಿಗಳು ಧರಣಿ ಕೈಗೊಳ್ಳದಂತೆ ಮತ್ತು ಹೆಚ್ಚು ಜನರು ಗುಂಪುಗೂಡಿ ಸಂಚರಿಸುವುದನ್ನು ನಿಷೇಧಿಸಿ ಪ್ರಭಾರಿ ಜಿಲ್ಲಾ ದಂಡಾಧಿಕಾರಿ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಸಂಡೂರಿನ ವಡ್ಡು- ಎಸ್. ಬಸಾಪುರ ಗ್ರಾಮದ ಮೂಲಕ ನೂತನ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅನುವಾಗುವಂತೆ ಸಂಚಾರವನ್ನು ಕ್ರಮಬದ್ಧವಾಗಿಸಲು ಸಿಆರ್ಪಿಸಿ 1974 ನಿಯಮ 133 ಹಾಗೂ 144ರನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕನಕ ಜಯಂತಿ: ಮೆರವಣಿಗೆ
ಬಳ್ಳಾರಿ: ಕನಕದಾಸರ ಜಯಂತಿ ಅಂಗವಾಗಿ ಜಿಲ್ಲಾಡಳಿತ ಏರ್ಪಡಿಸಿದ್ದ ಸ್ತಬ್ಧಚಿತ್ರಗಳ ಮೆರವಣಿಗೆ ಜರುಗಿತು.ಸಚಿವ ಪರಮೇಶ್ವರ ನಾಯ್ಕ ಚಾಲನೆ ನೀಡಿದರು. ರೇಷ್ಮೆ, ಪಶುಸಂಗೋಪನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು.